ನಿಟ್ಟೆ: ಕಾರ್ಕಳ ಸಮೀಪದ ನಿಟ್ಟೆ ಲೆಮನಾ ಬಳಿ ಇಂದು ಬೆಳಿಗ್ಗೆ ಮೊಟ್ಟೆ ಸಾಗಾಟದ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ರಸ್ತೆಪಾಲಾಗಿದ್ದು, ಪಾದಾಚಾರಿ ಹಾಗೂ ಕಾರ್ ಚಾಲಕ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಕಾರ್ಕಳದಿಂದ ಸಾಗುತ್ತಿದ್ದ ಮೊಟ್ಟೆ ಸಾಗಾಟದ ಲಾರಿ ಹಾಗೂ ಪಡುಬಿದ್ರಿಯಿಂದ ಕಾರ್ಕಳದ ಕಡೆಗೆ ತೆರಳುತ್ತಿದ್ದ ಕಿಯಾ ಸೆಲ್ಟೋಸ್ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಕಾರು ಅತಿವೇಗದಲ್ಲಿ ಲಾರಿಯ ಬದಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಲಾರಿ ಪಲ್ಟಿಯಾಗಿದೆ.

ಅಪಘಾತದ ವೇಳೆ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಟ್ಟೆಗಳು ರಸ್ತೆಗೆ ಚೆಲ್ಲಿಕೊಂಡು ಭಾರೀ ನಷ್ಟ ಸಂಭವಿಸಿದೆ. ಕಾರಿನಲ್ಲಿದ್ದ ಮಂಗಳೂರು ಮೂಲದ ಪೊಲೀಸ್ ಚಾಲಕನ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.