ಹಳೆಯ ದಾಖಲೆಗಳನ್ನು ಪುಡಿಗಟ್ಟಿದ ಬ್ರಿಜೇಶ್‌ ಚೌಟ ಸಾರಥ್ಯದ ʻಮಂಗಳೂರು ಕಂಬಳʼ: ಮಾಸ್ತಿಕಟ್ಟೆ ಸ್ವರೂಪ್ ಓಟದ ದಾಖಲೆ, ಮೇರಿ ಕೋಮ್ ಸಮ್ಮುಖದಲ್ಲಿ ದೇಶಭಕ್ತಿ–ಸಂಸ್ಕೃತಿಯ ಅನಾವರಣ

ಮಂಗಳೂರು: ತುಳುನಾಡಿನ ಸಂಸ್ಕೃತಿ, ಜಾನಪದ ಕ್ರೀಡೆ ಹಾಗೂ ದೇಶಭಕ್ತಿಯ ಸಂಭ್ರಮವನ್ನು ಒಂದೇ ವೇದಿಕೆಯಲ್ಲಿ ಮೇಳೈಸಿದ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಸಾರಥ್ಯದಲ್ಲಿ, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರ ಉಪಸ್ಥಿತಿಯಲ್ಲಿ ನಡೆದ 9ನೇ ವರ್ಷದ ʻಮಂಗಳೂರು ಕಂಬಳʼದಲ್ಲಿ ಈ ಬಾರಿ ಇತಿಹಾಸ ನಿರ್ಮಾಣವಾಗಿದೆ. ಕಂಬಳ ಓಟದ ವೇಗಕ್ಕೆ ಹೊಸ ಭಾಷ್ಯ ಬರೆದಂತೆ, ನೇಗಿಲು ಹಿರಿಯ ವಿಭಾಗದಲ್ಲಿ ಅಪರೂಪದ ನೂತನ ದಾಖಲೆಯೊಂದು ದಾಖಲಾಗಿದ್ದು, ಕಂಬಳ ಜಗತ್ತಿನ ಗಮನವನ್ನು ಮತ್ತೊಮ್ಮೆ ಮಂಗಳೂರಿನತ್ತ ಸೆಳೆದಿದೆ.

ಮಂಗಳೂರಿನ ಕುಳೂರಿನ ರಾಮ–ಲಕ್ಷ್ಮಣ ಜೋಡುಕರೆಯಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಎಂಬತ್ತು ಬಡಗಬೆಟ್ಟು ಶ್ರೀಕ ಸಂದೀಪ್ ಶೆಟ್ಟಿ ಅವರ ಕೋಣಗಳು 125 ಮೀಟರ್ ಉದ್ದದ ಕರೆಯನ್ನು ಕೇವಲ 10.87 ಸೆಕೆಂಡುಗಳಲ್ಲಿ ಕ್ರಮಿಸಿ ಹೊಸ ದಾಖಲೆಯನ್ನು ಸ್ಥಾಪಿಸಿವೆ. ಈ ಕೋಣಗಳನ್ನು ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್ ಕುಮಾರ್ ಓಡಿಸಿದ್ದು, ನೂರು ಮೀಟರ್ ದೂರವನ್ನು 8.69 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಈ ಹಿಂದೆ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಹೆಸರಲ್ಲಿದ್ದ ದಾಖಲೆಯನ್ನು ಮೀರಿಸಿದ್ದಾರೆ.

ಈ ಹಿಂದೆ 2021ರಲ್ಲಿ ಕಕ್ಯಪದವು ಕಂಬಳದಲ್ಲಿ ಶ್ರೀನಿವಾಸ ಗೌಡರು 125 ಮೀಟರ್ ಓಟವನ್ನು 10.95 ಸೆಕೆಂಡುಗಳಲ್ಲಿ ಕ್ರಮಿಸಿ (ನೂರು ಮೀಟರಿಗೆ 8.76 ಸೆಕೆಂಡು) ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದರು. ಜಗತ್ತಿನ ಅತಿವೇಗದ ಓಟಗಾರ ಹುಸೇನ್ ಬೋಲ್ಟ್‌ನ ನೂರು ಮೀಟರ್ ದಾಖಲೆಯೊಂದಿಗೆ ಹೋಲಿಕೆ ನಡೆದಿತ್ತು. ಇದೀಗ ಮಾಸ್ತಿಕಟ್ಟೆ ಸ್ವರೂಪ್ ಅವರ ಅಪರೂಪದ ಓಟ ಕಂಬಳ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ.

ಮಂಗಳೂರು| ಕಂಬಳಕ್ಕೆ ಮೆರುಗು ತಂದ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್: ಯಶಸ್ವಿಯಾಗಿ ಸಂಪನ್ನಗೊಂಡ ನವ ವರ್ಷದ ಕಂಬಳ

ಕಂಬಳ ಓಟದಲ್ಲಿ ಕೋಣಗಳೊಂದಿಗೆ ಓಡುವ ಓಟಗಾರನ ವೇಗವೂ ಅಷ್ಟೇ ಮುಖ್ಯವಾಗಿದ್ದು, ಮಾನವ ಶಕ್ತಿ ಮತ್ತು ಪ್ರಾಣಿಶಕ್ತಿಯ ಸಂಯೋಜನೆಯೇ ಈ ಕ್ರೀಡೆಯ ವೈಶಿಷ್ಟ್ಯ. ಅತಿ ವೇಗದಲ್ಲಿ ಓಡುವ ಓಟಗಾರನಿಗೆ ಮಾತ್ರ ಕೋಣಗಳ ಸಂಪೂರ್ಣ ಸಾಮರ್ಥ್ಯವನ್ನು ಹೊರತರಲು ಸಾಧ್ಯ ಎಂಬ ಸತ್ಯಕ್ಕೆ ಈ ದಾಖಲೆ ಮತ್ತೊಮ್ಮೆ ಸಾಕ್ಷಿಯಾಗಿದೆ.

ಮೇರಿ ಕೋಮ್ ಸಮ್ಮುಖದಲ್ಲಿ ಕಂಬಳಕ್ಕೆ ಗೌರವ

ಈ ಕ್ರೀಡಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದದ್ದು, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರ ಉಪಸ್ಥಿತಿ. ಶನಿವಾರ ರಾತ್ರಿ ಕಂಬಳ ವೀಕ್ಷಿಸಿದ ಅವರು, “ಇದು ನಾನು ನೇರವಾಗಿ ನೋಡುತ್ತಿರುವ ಮೊದಲ ಕಂಬಳ. ನಿಜಕ್ಕೂ ಅದ್ಭುತ ಮತ್ತು ಅಪರೂಪದ ಕ್ರೀಡಾ ಸಂಭ್ರಮ” ಎಂದು ಕಂಬಳದ ವೈಭವವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಮಂಗಳೂರು ಕಂಬಳ ಸಮಿತಿ ವತಿಯಿಂದ ಮೇರಿ ಕೋಮ್ ಅವರಿಗೆ ದಕ್ಷಿಣ ಕನ್ನಡ ಸಂಸದ ಹಾಗೂ ಸಮಿತಿ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ಅವರು ಕಂಬಳದ ಬೆತ್ತ ಮತ್ತು ಕೋಣಗಳ ಸ್ಮರಣಿಕೆ ನೀಡಿ ಗೌರವಿಸಿದರು.

ದೇಶಭಕ್ತಿ, ಸಂಸ್ಕೃತಿ ಮತ್ತು ಸಂಸ್ಕೃತಿಯ ಸ್ಪರ್ಶ

ನವ ವರ್ಷದ ನವ ವಿಧದ ಮಂಗಳೂರು ಕಂಬಳವು ಕೇವಲ ಕ್ರೀಡಾ ಸ್ಪರ್ಧೆಯಲ್ಲದೆ, ಸಮಾಜಮುಖಿ ಮತ್ತು ದೇಶಭಕ್ತಿಯ ವೇದಿಕೆಯಾಗಿಯೂ ಮೂಡಿಬಂದಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ‘ವಂದೇ ಮಾತರಂ’ ಗೀತೆಯನ್ನು ಹಾಡಿ ವಿಡಿಯೋ ಅಪ್ಲೋಡ್ ಮಾಡಲು ವಿಶೇಷ ಬೂತ್ ವ್ಯವಸ್ಥೆ ಮಾಡಲಾಗಿದ್ದು, 1000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಡಿಜಿಟಲ್ ಪ್ರಮಾಣಪತ್ರ ಪಡೆದುಕೊಂಡರು.

ಇದಲ್ಲದೆ, ‘ಬ್ಯಾಕ್ ಟು ಊರು’ ಪರಿಕಲ್ಪನೆಯಡಿ ತಾಯ್ನಾಡಿಗೆ ಮರಳಿ ಸ್ವಂತ ಉದ್ಯಮ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿರುವ ಒಂಬತ್ತು ಉದ್ಯಮಿಗಳನ್ನು ಕಂಬಳ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವೃದ್ಧಾಶ್ರಮದ ಹಿರಿಯ ಜೀವಗಳಿಗೆ ಕಂಬಳ ವೀಕ್ಷಣೆಯ ಅವಕಾಶ ಕಲ್ಪಿಸಿದ ಮಾನವೀಯ ನಡೆ ಕೂಡ ಎಲ್ಲರ ಮನ ಗೆದ್ದಿತು. ಏಕ್ ಪೇಡ್ ಮಾ ಕೇ ನಾಮ್ ಅಭಿಯಾನದಂತೆ ಮಂಗಳೂರು ಕಂಬಳದಲ್ಲಿಯೂ 200ಕ್ಕೂ ಹೆಚ್ಚು ಸಸಿ ವಿತರಿಸುವ ಬಹಳ ವಿಭಿನ್ನ ವ್ಯವಸ್ಥೆ ಕಲ್ಪಿಸಲಾಗಿತ್ತು. ಏಕ್ ಪೇಡ್ ಮಾ ಕೇ ನಾಮ್ ಅಭಿಯಾನದ ಅಂಗವಾಗಿ ಸಸಿ ವಿತರಣೆ, ರೀಲ್ಸ್ ಮೇಕಿಂಗ್, ಫೋಟೋಗ್ರಫಿ ಹಾಗೂ ಡ್ರಾಯಿಂಗ್ ಸ್ಪರ್ಧೆಗಳು ಕಂಬಳಕ್ಕೆ ಮತ್ತಷ್ಟು ಬಣ್ಣ ತುಂಬಿದವು.

ಯಶಸ್ಸಿನ ಸಂತೃಪ್ತಿ
ಕಂಬಳದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, “ಮಂಗಳೂರು ಕಂಬಳ ಸಮಿತಿಯ ಅವಿರತ ಪರಿಶ್ರಮದಿಂದ ಈ ಬಾರಿ ಕಂಬಳವು ತುಳುನಾಡಿನ ಅಸ್ಮಿತೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಜನರಲ್ಲಿ ದೇಶಭಕ್ತಿಯ ಭಾವವನ್ನು ಉದ್ದೀಪನಗೊಳಿಸಿದ್ದು, ಮುಂದಿನ 10ನೇ ವರ್ಷದ ಕಂಬಳವನ್ನು ಇನ್ನಷ್ಟು ವೈಭವೋಪೇತವಾಗಿ ಆಯೋಜಿಸಲು ಪ್ರೇರಣೆಯಾಗಿದೆ” ಎಂದು ಹೇಳಿದರು.

ವೇಗದ ದಾಖಲೆ, ರಾಷ್ಟ್ರಮಟ್ಟದ ಗಮನ, ದೇಶಭಕ್ತಿಯ ಸ್ಪೂರ್ತಿ ಮತ್ತು ಮಾನವೀಯ ಸ್ಪರ್ಶ—ಇವೆಲ್ಲವನ್ನು ಒಂದೇ ವೇದಿಕೆಯಲ್ಲಿ ಮೇಳೈಸಿದ ಮಂಗಳೂರು ಕಂಬಳ 2025, ತುಳುನಾಡಿನ ಕ್ರೀಡಾ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯವನ್ನೇ ಬರೆದಿದೆ.

🦬141 ಜೋಡಿ ಕೋಣಗಳ ಸ್ಪರ್ಧೆ – ನೇಗಿಲು ಹಿರಿಯ ವಿಭಾಗದಲ್ಲಿ ನೂತನ ದಾಖಲೆ🦬

ಮಂಗಳೂರು ಕಂಬಳದಲ್ಲಿ ಒಟ್ಟು 141 ಜೋಡಿ ಕೋಣಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಕಂಬಳದ ವೈಭವಕ್ಕೆ ಸಾಕ್ಷಿಯಾದವು. ವಿವಿಧ ವಿಭಾಗಗಳಲ್ಲಿ ನಡೆದ ರೋಚಕ ಸ್ಪರ್ಧೆಗಳಲ್ಲಿ ವೇಗ, ಸಂಯೋಜನೆ ಮತ್ತು ಕೌಶಲ್ಯದ ಪ್ರದರ್ಶನ ಗಮನ ಸೆಳೆಯಿತು.

🦬 ಅಡ್ಡ ಹಲಗೆ

ಪ್ರಥಮ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟಿ “ಎ” – 11.68 ಸೆಕೆಂಡು
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ರೈ, ಬೊಳ್ಯಾರು – 11.83 ಸೆಕೆಂಡು
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ

🦬 ಹಗ್ಗ – ಹಿರಿಯ ವಿಭಾಗ

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ – 11.41 ಸೆಕೆಂಡು
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ, ಪ್ರಾಣೇಶ್ ದಿನೇಶ್ ಭಂಡಾರಿ “ಎ” – 11.50 ಸೆಕೆಂಡು
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

🦬 ಹಗ್ಗ – ಕಿರಿಯ ವಿಭಾಗ

ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ “ಬಿ” – 11.41 ಸೆಕೆಂಡು
ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ

ದ್ವಿತೀಯ: ಎರ್ಮಾಳ್ ಡಾ. ಚಿಂತನ್ ರೋಹಿತ್ ಹೆಗ್ಡೆ – 11.62 ಸೆಕೆಂಡು
ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ

🦬 ನೇಗಿಲು – ಹಿರಿಯ ವಿಭಾಗ

ಪ್ರಥಮ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ – 10.87 ಸೆಕೆಂಡು
ಓಡಿಸಿದವರು: ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್
(ಕಂಬಳದ ಇತಿಹಾಸದಲ್ಲೇ ಅಪರೂಪದ ನೂತನ ದಾಖಲೆ)

ದ್ವಿತೀಯ: ಮಂಗಳೂರು ಮರಕಡ ಬಾಯಾಡಿ ಮನೆ ಶಾಂತ ಸಂಜಯ್ ಶೆಟ್ಟಿ “ಎ” – 11.44 ಸೆಕೆಂಡು
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

🦬 ನೇಗಿಲು – ಕಿರಿಯ ವಿಭಾಗ

ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಬಿ” – 11.56 ಸೆಕೆಂಡು
ಓಡಿಸಿದವರು: ಕಾವೂರುದೋಟ ಸುದರ್ಶನ್

ದ್ವಿತೀಯ: ಮುಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ – 11.74 ಸೆಕೆಂಡು
ಓಡಿಸಿದವರು: ಬಾರಾಡಿ ನತೀಶ್ ಸಫಲಿಗ

error: Content is protected !!