ಸೌಹಾರ್ದ–ಸಬಲೀಕರಣದ ಸಂದೇಶ ಹೊತ್ತು ಸಾಗಿದ ಶತಾಬ್ದ ಯಾತ್ರೆ: ಡಿ.28ರಂದು ಅಡ್ಯಾರ್ ಕಣ್ಣೂರಿನಲ್ಲಿ ಮಹಾಸಮ್ಮೇಳನ

ಮಂಗಳೂರು: ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ, ಸಂಸ್ಥೆಯ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಸೆಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಜಳ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಶತಾಬ್ದ ಸಂದೇಶ ಯಾತ್ರೆಯ ಸಮಾರೋಪ ಮಹಾಸಮ್ಮೇಳನವು ಡಿಸೆಂಬರ್ 28ರಂದು ಮಂಗಳೂರಿನ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಜರಗಲಿದೆ ಎಂದು ಮುಖಂಡ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾಹಿತಿ ನೀಡಿದರು.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1926ರಲ್ಲಿ ಸ್ಥಾಪನೆಯಾದ ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾ ಸಂಸ್ಥೆ 2026ರಲ್ಲಿ ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಶತಾಬ್ದಿ ಮಹಾಸಮ್ಮೇಳನವನ್ನು 2026ರ ಫೆಬ್ರವರಿ 4, 5, 6, 7 ಮತ್ತು 8ರಂದು ಕಾಸರಗೋಡಿನ ಕುಣಿಯದಲ್ಲಿ ಅತ್ಯಂತ ಭವ್ಯವಾಗಿ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಈ ಶತಮಾನೋತ್ಸವದ ಪೂರ್ವಭಾವಿಯಾಗಿ, ಸಮಸ್ತ ವಿದ್ವಾಂಸ ಸಭೆಯ ಪರಮೋಚ್ಚ ಮುಷಾವರ (ಶೂರಾ) ಮುಖ್ಯಸ್ಥರಾದ ಸೆಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಜಳ್ ಅವರ ನೇತೃತ್ವದಲ್ಲಿ ಶತಾಬ್ದ ಸಂದೇಶ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಡಿಸೆಂಬರ್ 19ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋವಿಲ್‌ನಿಂದ ಆರಂಭಗೊಂಡ ಈ ಯಾತ್ರೆ ತಿರುವನಂತಪುರಂ, ಕೊಲ್ಲಂ, ಪತನಂತಿಟ್ಟ, ಕೋಟ್ಟಯಂ, ಆಲಪ್ಪುಯ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ತಿರೂರ್, ಮಲಪ್ಪುರಂ, ಪಾಲಕ್ಕಾಡ್, ಗೂಡಲ್ಲೂರು, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಒಟ್ಟು 18 ಪ್ರಮುಖ ಕೇಂದ್ರಗಳಲ್ಲಿ ಸಂಚರಿಸುತ್ತಿದೆ ಎಂದು ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ತಿಳಿಸಿದರು.

ಸುಮಾರು ಸಾವಿರ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರವನ್ನು ಕ್ರಮಿಸುತ್ತಿರುವ ಈ ಸಂದೇಶ ಯಾತ್ರೆ, ಸಾಮಾಜಿಕ ಹಾಗೂ ಶೈಕ್ಷಣಿಕ ಜಾಗೃತಿ, ಸಮುದಾಯದ ಸಬಲೀಕರಣ, ನೈತಿಕ ಮೌಲ್ಯಗಳ ರಕ್ಷಣೆ, ಸೌಹಾರ್ದತೆ, ದೇಶಪ್ರೇಮ, ಮಾನವೀಯ ಸೇವೆ ಮತ್ತು ಭಾರತೀಯ ಜಾತ್ಯಾತೀತ ಪರಂಪರೆಯನ್ನು ಬಲಪಡಿಸುವ ಉದ್ದೇಶವನ್ನು ಹೊತ್ತಿದೆ. ಪ್ರತಿಯೊಂದು ಪ್ರಮುಖ ಕೇಂದ್ರದಲ್ಲಿಯೂ ಯಾತ್ರೆಗೆ ಅದ್ಧೂರಿ ಸ್ವಾಗತ ಸಮ್ಮೇಳನಗಳು ನಡೆಯುತ್ತಿವೆ ಎಂದರು.

ಕಾರ್ಯಕ್ರಮವು ಸುಸೂತ್ರವಾಗಿ ನಡೆಯಲು ಪಾರ್ಕಿಂಗ್, ಸ್ವಚ್ಛತೆ ಮತ್ತು ಸಂಚಾರ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಉನ್ನತ ಮಟ್ಟದ ಅಧಿಕಾರಿಗಳ ಸಲಹೆಯೊಂದಿಗೆ ಕೈಗೊಳ್ಳಲಾಗಿದೆ. ಐದು ವಿಭಿನ್ನ ಮೈದಾನಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. 313 ಸ್ವಯಂಸೇವಕರು ಈಗಾಗಲೇ ಸಜ್ಜಾಗಿದ್ದು, ಸಾರ್ವಜನಿಕರಿಗೆ ಯಾವುದೇ ಅಸೌಕರ್ಯ ಉಂಟಾಗದಂತೆ ಹಾಗೂ ರಸ್ತೆ ತಡೆ ಸಂಭವಿಸದಂತೆ ಪೂರ್ಣ ಜಾಗೃತಿ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಡಿ.28ರಂದು ಸಂಜೆ 3 ಗಂಟೆಗೆ ಮದ್ರಸ ಅಧ್ಯಾಪಕರ ಸಂಗಮ ನಡೆಯಲಿದ್ದು, ಸಂಜೆ 4 ಗಂಟೆಗೆ ಶತಾಬ್ದ ಸಂದೇಶ ಯಾತ್ರೆಯ ಸಮಾರೋಪ ಸಭಾ ಕಾರ್ಯಕ್ರಮ ಜರಗಲಿದೆ. ಈ ಸಮಾರಂಭಕ್ಕೆ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅವರು ಅಧ್ಯಕ್ಷತೆ ವಹಿಸಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರು, ಸೆಯ್ಯದ್ ಝನುಲ್ ಆಬಿದ್ ಜಿಫ್ರಿ ತಂಜಳ್ ಬೆಳ್ತಂಗಡಿ, ಸೆಯ್ಯದ್ ಅಮೀರ್ ತಂಜಳ್ ಕಿನ್ಯ, ಶರೀಫ್ ಪೈಝಿ ಕಡಬ, ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕಾಸಿಮ್ ದಾರಿಮಿ ನಂದಾವರ, ಅನೀಸ್ ಕೌಸರಿ ಕುಂಬ್ರ, ರಫೀಕ್ ಅಹ್ಮದ್ ಹುದವಿ, ಇರ್ಷಾದ್ ದಾರಿಮಿ ಮಿತ್ತಬೈಲ್, ತಾಜುದ್ದೀನ್ ರಹ್ಮಾನಿ, ರಿಯಾಝಿ ರಹ್ಮಾನಿ, ಇಬ್ರಾಹಿಂ ದಾರಿಮಿ ಕಡಬ, ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ, ಶಂಸುದ್ದೀನ್ ದಾರಿಮಿ, ಎಂ.ಎಚ್. ಮೈದೀನ್ ಹಾಜಿ ಅದ್ದೂರ್, ರಪೀಕ್ ಹಾಜಿ ಕೊಡಾಜೆ, ಹಕೀಂ ಪರ್ತಿಪ್ಪಾಡಿ, ಅಬ್ದುಲ್ ಹಮೀದ್ ಅಡ್ವಾರ್, ಮುಹಮ್ಮದ್ ಸಾಗರ್ ಮಿತ್ತಬೈಲ್, ಅಬ್ದುಲ್ ರಶೀದ್ ರಹ್ಮಾನಿ ಹಾಗೂ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

error: Content is protected !!