ಬೆಂಗಳೂರು: ತನ್ನ 39 ವರ್ಷದ ಪ್ರಿಯತಮೆಯನ್ನು 25ರ ಪ್ರಿಯಕರನೇ ಕತ್ತು ಸೀಳಿ ಭೀಕರವಾಗಿ ಹತ್ಯೆಗೈದ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿಪುರದಲ್ಲಿ ಸಂಭವಿಸಿದೆ.
ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಮಮತಾ(39) ಕೊಲೆಯಾದ ಯುವತಿ. ಜಯದೇವದಲ್ಲಿ ಈಕೆಯ ಜೊತಗೆ ಕೆಲಸ ಮಾಡಿಕೊಂಡಿದ್ದ ಹಾಸನದ ಸುಧಾಕರ್(25) ಕೊಲೆ ಮಾಡಿದ ಆರೋಪಿ.

ಇಬ್ಬರೂ ಜೊತೆಯಾಗಿ ಕೆಲಸ ಮಾಡಿಕೊಂಡಿದ್ದರಿಂದ ಇಬ್ಬರಿಗೂ ಲವ್ ಆಗಿತ್ತು. ಲವ್ ಮಾಡುವಾಗ ಕೊನೆಯವರಿಗೂ ನಿನ್ನ ಜೊತೆಯಲ್ಲೇ ಇರುತ್ತೇನೆ ಎಂದು ಮಾತುಕೊಟ್ಟಿದ್ದರೂ ಅವಳಿಗೆ ಗೊತ್ತಾಗದಂತೆ ಬೇರೊಂದು ಯುವತಿಯ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ಇದು ಮಮತಾ ಹಾಗೂ ಸುಧಾಕರನ ನಡುವೆ ಜಗಳಕ್ಕೆ ಕಾರಣವಾಗಿತ್ತು.
ಒಂದು ವರ್ಷಗಳ ಕಾಲ ಇಬ್ಬರು ಚೆನ್ನಾಗಿಯೇ ಇದ್ದರು. ಆದರೆ ಸುಧಾಕರ್‌ಗೆ ನಿಶ್ಚಿತಾರ್ಥ ಆಗಿದ್ದ ವಿಚಾರ ಮಮತಾ ಕಿವಿಗೆ ಬಿದ್ದ ಬಳಿಕ ಇಬ್ಬರ ನಡುವೆ ವಿರಸ ಉಂಟಾಗಲು ಆರಂಭವಾಯಿತು. ಮಾತು ಕೊಟ್ಟಿದ್ದೀಯಾ.. ಮದುವೆ ಆಗುವಂತೆ ಸುಧಾಕರ್‌ಗೆ ಯುವತಿ ದುಂಬಾಲು ಬಿದ್ದಿದ್ದಳು. ಮದುವೆ ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಕೂಡ ಆಗುತ್ತಿತ್ತು.

ನಿನ್ನೆ ಸುಧಾಕರ್ ಪ್ರೇಯಸಿ ಮಮತಾ ಮನೆಗೆ ಹೋದಾಗ, ʻಮದುವೆ ಆಗು.. ಇಲ್ಲದೇ ಹೋದರೆ ನಾನು ನಿಮ್ಮ ಮನೆಯವರ ಹೆಸರಿನಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿʼ ಎಂದು ಬೆದರಿಸಿದ್ದಾರೆ. ಪ್ರೇಯಸಿ ನಡೆಯಿಂದ ಕುಪಿತಗೊಂಡ ಸುಧಾಕರ್ ಆಕೆಯನ್ನು ಕೊಲೆ ಮಾಡಿದ್ದಾನೆ.
ವಯಸ್ಸಿನ ಅಂತರ ಜಾಸ್ತಿ ಇದೆ ಎಂಬ ಕಾರಣಕ್ಕೆ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ. ಕೊಲೆ ಮತ್ತು ಅಟ್ರಾಸಿಟಿ ಕೇಸ್ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.