ಕಡಬ: ಬಾರ್ ವ್ಯವಹಾರ ನೋಡುತ್ತಿದ್ದ ವ್ಯಕ್ತಿಯೋರ್ವ ಮಾಲಕನ ಲಕ್ಷಾಂತರ ಹಣವನ್ನು ಎಗರಿಸಿ ಪರಾರಿಯಾದ ಕುರಿತಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ, ಹುಂಚಪ್ಪಡಿ ನಿವಾಸಿ ಹರ್ಷಿತ್ ಬಿ.ಕೆ. ಪ್ರಕರಣದ ಆರೋಪಿ. ಕಡಬ ಬಿಳಿನೆಲೆ ನಿವಾಸಿ ವಿಶಾಲ್ ಸ್ಟೀಫನ್(25) ವಂಚನೆಗೊಳಗಾದ ಬಾರ್ ಮಾಲಕ.

ವಿಶಾಲ್ ಸ್ಟೀಫನ್ ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ಬಾರ್ ಹೊಂದಿದ್ದು, ಇದರಲ್ಲಿ ಹರ್ಷಿತ್ ಬಿ ಕೆ ಎಂಬಾತನು ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆತನೇ ದಿನನಿತ್ಯದ ಹಣಕಾಸಿನ ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ನಿರ್ವಹಿಸುತ್ತಿದ್ದನು. ಆದರೆ ಡಿ.21ರಂದು ರಾತ್ರಿ ವಿಶಾಲ್ ಸ್ಟೀಫನ್ ಅವರು ಬಾರಿನ ವಹಿವಾಟು ಬಗ್ಗೆ ಪರಿಶೀಲನೆ ನಡೆಸಿದಾಗ ವಹಿವಾಟಿನಲ್ಲಿ ವ್ಯತ್ಯಯ ಕಂಡುಬಂದಿತ್ತು. ಈ ಬಗ್ಗೆ ಹರ್ಷಿತ್ ಬಳಿ ವಿಚಾರಿಸಿದಾಗ ಮರುದಿನ ಸರಿಯಾಗಲಿದೆ ಹಾಗೂ ವ್ಯಾಪಾರದ ನಗದನ್ನು ಮರುದಿನವೇ ಬ್ಯಾಂಕಿನಲ್ಲಿ ಜಮೆ ಮಾಡುವುದಾಗಿ ತಿಳಿಸಿದ್ದನು.
ಆದರೆ ಮರುದಿನ ಹಣ ಜಮೆಯಾಗದಿರುವುದರಿಂದ ಆತನ ಬಳಿ ವಿಚಾರಿಸಲು ಆತ ವಾಸ್ತವ್ಯವಿದ್ದ ಕೊಠಡಿಗೆ ಹೋದಾಗ ಆತನು ನಾಪತ್ತೆಯಾಗಿದ್ದು, ಸಂಶಯಗೊಂಡು ಪರಿಶೀಲಿಸಿದಾಗ ಸ್ಟೋಕ್ ರೂಮ್‌ನಲ್ಲಿದ್ದ ಸುಮಾರು ರೂ. 6,57,104 ಮೌಲ್ಯದ ಮದ್ಯವನ್ನು ಈ ಮೊದಲೇ ಆರೋಪಿಯು ಮಾರಾಟ ಮಾಡಿ, ಆ ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಆರೋಪಿ ಹರ್ಷಿತ್ ಬಿ.ಕೆ. ಡಿ.21ರಂದೇ ವ್ಯಾಪಾರದ ನಗದನ್ನು ಕಳವು ಮಾಡಿ ಪರಾರಿಯಾಗಿರುವುದು ಕಂಡುಬಂದಿದೆ.
ಈ ಬಗ್ಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ: 94/2025. ಕಲಂ: 303(2), 314, 316(4) BNS-2023 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.