ಮಂಗಳೂರು: ನಕಲಿ ಷೇರು ಮಾರ್ಕೆಟಿಂಗ್ ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ 85,68,387 ರೂ. ವಂಚನೆ ಮಾಡಿರುವ ಬಗ್ಗೆ ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ನಿರುದ್ಯೋಗಿಯಾದ ವ್ಯಕ್ತಿ ಮೋಸಕ್ಕೆ ಒಳಗಾದವರು.
ಇನ್ಸ್ಟಾಗ್ರಾಂ ನೋಡುತ್ತಿದ್ದ ವೇಳೆ ಷೇರು ಮಾರುಕಟ್ಟೆ ಆನ್ ಲೈನ್ ಟ್ರೇಡಿಂಗ್ ಕ್ಲಾಸ್ ಗೆ ಲಿಂಕ್ ಮೂಲಕ ಸೇರಿ ನೋಂದಾಯಿಸಿಕೊಂಡಿದ್ದರು. ಅ.31 ರಂದು ವಾಟ್ಸ್ ಆ್ಯಪ್ ಗ್ರೂಪ್ ಒಂದಕ್ಕೆ ಅವರ ಮೊಬೈಲ್ ನಂಬರ್ ಸೇರಿತು. ಬಳಿಕ ಗ್ರೂಪ್ ನಲ್ಲಿದ್ದ ಕಾವ್ಯ ಎಂಬಾಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡಿರುವುದಾಗಿ ಪರಿಚಯಿಸಿಕೊಂಡು ಷೇರು ಹೂಡಿಕೆ ಕುರಿತ ವಿವಿಧ ಜಾಹೀರಾತುಗಳನ್ನು ಹಾಕಿ, ಹಣ ದುಪ್ಪಟ್ಟು ಮಾಡಬಹುದು ಎಂಬುದಾಗಿ ಸಂದೇಶ ಕಳುಹಿಸಿದಳು. ಇದರಿಂದ ಅವರು ಹಣ ಹೂಡಿಕೆ ಮಾಡಲು ಆಸಕ್ತಿ ಬೆಳೆಸಿಕೊಂಡರು.
ಬಳಿಕ ಅಪರಿಚಿತ ವ್ಯಕ್ತಿಗಳು ಆ್ಯಪ್ ಗಳನ್ನು ಕಳುಹಿಸಿ, ನೋಂದಾಯಿಸಲು ತಿಳಿಸಿದ್ದನ್ನು ಪಾಲಿಸಿದರು. ತರುವಾಯ ಸ್ಟಾಕ್ ಪರ್ಚೇಸ್ ಮಾಡಿದಾಗ ಸ್ವಲ್ಪ ಲಾಭಾಂಶವಾಗಿ ಹಣ ಬಂದಿತು. ಇದರಿಂದ ಪ್ರೇರಣೆಗೊಂಡು ನ.11 ರಿಂದ ಡಿ.9 ರ ವರೆಗೆ ಹಂತ ಹಂತವಾಗಿ 85,68,387 ರೂ. ಹೂಡಿಕೆ ಮಾಡಿದರು. ಡಿ.10 ರಂದು ವಂಚಕರು ಇನ್ನಷ್ಟು ಹಣ ಹೂಡಿಕೆ ಮಾಡಲು ತಿಳಿಸಿದಾಗ, ಈಗಾಗಲೇ ಹೂಡಿಕೆ ಮಾಡಿದ ಹಣ ವಾಪಸು ಕೇಳಿದಾಗ, ಅದಕ್ಕೆ ಸೇವಾ ತೆರಿಗೆ ಪಾವತಿಸಬೇಕೆಂದು ಅಪರಿಚಿತರು ಒತ್ತಾಯಿಸಿದ್ದಾಗ, ಅನುಮಾನಗೊಂಡು ಮೋಸಕ್ಕೊಳಗಾದವರು ಹೊಸ ಹೂಡಿಕೆ ಮಾಡಲಿಲ್ಲ. ಆಮೇಲೆ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿತು.