ಮಂಗಳೂರು: ಜೆಸಿಐ ಮಂಗಳೂರು ಇಂಪ್ಯಾಕ್ಟ್ 2026ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಾ. ಶ್ವೇತಾ ಕಾಮತ್ ಅವರು, ನಾಯಕತ್ವ ವಿಕಾಸ, ಸಮುದಾಯ ಸೇವೆ, ಮಹಿಳಾ ಹಾಗೂ ಮಕ್ಕಳ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡುವುದಾಗಿ ಹೇಳಿದರು.

ಪ್ರೆಸ್‌ಕ್ಲಬ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಸಿಐ ಮಂಗಳೂರು ಇಂಪ್ಯಾಕ್ಟ್ ಸಂಸ್ಥೆಯ ಮೂಲಕ ಸಮಾಜಕ್ಕೆ ಸ್ಪಷ್ಟವಾದ ಹಾಗೂ ಅರ್ಥಪೂರ್ಣ ಬದಲಾವಣೆ ತರುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. “ಜೆಸಿಐ ವೇದಿಕೆ ಯುವ ನಾಯಕತ್ವ ನಿರ್ಮಾಣಕ್ಕೆ ಶಕ್ತಿಯುತ ವೇದಿಕೆಯಾಗಿದೆ. 2026ರ ಅವಧಿಯಲ್ಲಿ ಸೇವೆ ಮತ್ತು ಸಕಾರಾತ್ಮಕ ಪ್ರಭಾವವನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ಕೆಲಸ ಮಾಡಲಾಗುವುದು” ಎಂದರು.
ಜೆಸಿಐ ಮಂಗಳೂರು ಇಂಪ್ಯಾಕ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ವಲಯ ಉಪಾಧ್ಯಕ್ಷ ಜೆಎಫ್‌ಎಂ ದೀಪಕ್ ಗಾಂಗುಲಿ ಮಾತನಾಡಿ, ವೈದ್ಯಕೀಯ ತಜ್ಞೆಯಾಗಿರುವ ಡಾ. ಶ್ವೇತಾ ಕಾಮತ್ ಅವರು ಫಾರ್ಮಾ ಕ್ಷೇತ್ರದಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಲಾವಿದೆಯೂ ಹೌದು. ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್–2025 ರಾಷ್ಟ್ರೀಯ ಪ್ರಶಸ್ತಿ ವಿಜೇತೆಯಾಗಿರುವ ಅವರು, ಸಹಾನುಭೂತಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ನಾಯಕತ್ವದ ಮೂಲವಾಗಿಟ್ಟುಕೊಂಡಿರುವುದಾಗಿ ಹೇಳಿದರು.

ಈ ವೇಳೆ ಜೆಸಿಐ ಮಂಗಳೂರು ಇಂಪ್ಯಾಕ್ಟ್ 2026ರ ಪದಗ್ರಹಣ ಸಮಾರಂಭವು ಡಿಸೆಂಬರ್ 21ರಂದು ನಂತೂರು ಪಡುವದ ಎಡನ್ ಕ್ಲಬ್‌ನಲ್ಲಿ ನಡೆದಿರುವುದನ್ನು ಸ್ಮರಿಸಿ, ನೂತನ ಪದಾಧಿಕಾರಿಗಳ ತಂಡದೊಂದಿಗೆ ಸಂಘಟಿತವಾಗಿ ಸಮುದಾಯಪರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಪದಾಧಿಕಾರಿಗಳಾದ ಸ್ವಾತಿ, ರವಿರಾಜ್, ಅನಿಷಾ, ನಿರ್ಮಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.