ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ಪರಿಣಮಿಸಿದ್ದು, ಬಡ ಜನರ ಮೇಲೆ ಮಾತ್ರ ದಬ್ಬಾಳಿಕೆ ನಡೆಯುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.

ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗೂಡಂಗಡಿ ತೆರವು, ಪ್ಲೆಕ್ಸ್ ನಿಯಮಗಳ ಜಾರಿಗೆ ತಾರತಮ್ಯ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಕಾಂಗ್ರೆಸ್ ನೇತೃತ್ವದ ಪಾಲಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕದ್ರಿಪಾರ್ಕ್, ಲೇಡಿಹಿಲ್ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ಗೂಡಂಗಡಿಗಳನ್ನು ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಲಾಗುತ್ತಿದೆ. ಆದರೆ ಕಾಂಗ್ರೆಸ್ ನಾಯಕರ ಸೂಚನೆಯಿರುವ ಸ್ಥಳಗಳಲ್ಲಿ ಕ್ರಮ ಕೈಗೊಳ್ಳದೆ, ದುಡಿದು ಬದುಕುವ ಬಡ ವ್ಯಾಪಾರಿಗಳ ಮೇಲೆ ಮಾತ್ರ ದಬ್ಬಾಳಿಕೆ ನಡೆಯುತ್ತಿದೆ ಎಂದು ಶಾಸಕ ಕಾಮತ್ ಹೇಳಿದರು. ತೆರವುಗೊಳಿಸಲೇಬೇಕಾದ ಅನಿವಾರ್ಯತೆ ಇದ್ದರೆ ಎಲ್ಲೆಡೆ ಒಂದೇ ನಿಯಮ ಜಾರಿಗೆ ಬರಬೇಕು, ಇಲ್ಲದಿದ್ದರೆ ಯಾವುದನ್ನೂ ಮುಟ್ಟಬಾರದು ಎಂದರು.
ಪ್ಲೆಕ್ಸ್ ಹಾಗೂ ಬ್ಯಾನರ್‌ಗಳ ವಿಚಾರದಲ್ಲಿಯೂ ಪಾಲಿಕೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ, ಕಾಂಗ್ರೆಸ್ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್ ನಾಯಕರ ನೇತೃತ್ವದ ಕಾರ್ಯಕ್ರಮಗಳಿಗೆ ಹಾಕುವ ಪ್ಲೆಕ್ಸ್‌ಗಳ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪ್ಲೆಕ್ಸ್‌ಗಳನ್ನು ಮಾತ್ರ ತಕ್ಷಣವೇ ತೆರವುಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ನಿಯಮಗಳು ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತಿವೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಒಂದು ಕಾಲದಲ್ಲಿ ಸ್ವಚ್ಛತೆಗೆ ಹೆಸರಾದ ಮಂಗಳೂರು ಇಂದು ಕಸದ ಸಮಸ್ಯೆಯಿಂದ ನರಳುತ್ತಿದೆ. ನಗರದ ಅನೇಕ ಬೀದಿ ಬೀದಿಗಳಲ್ಲಿ ಕಸದ ರಾಶಿ ಹಾಗೂ ಕಟ್ಟಡ ಅವಶೇಷಗಳು ಬಿದ್ದಿದ್ದರೂ ಅವುಗಳನ್ನು ತೆರವುಗೊಳಿಸುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ಅನುದಾನ ಕೊರತೆಯಿಂದ ಅಭಿವೃದ್ಧಿ ಸ್ಥಗಿತಗೊಂಡಿದ್ದು, ಬೇಸಿಗೆ ಕಾಲವೂ ಅಲ್ಲದಿದ್ದರೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅನೇಕ ವಾರ್ಡ್‌ಗಳಲ್ಲಿ ವಾರಗಟ್ಟಲೆ ನೀರು ಪೂರೈಕೆಯಾಗುತ್ತಿಲ್ಲ ಎಂದರು.
ಮಂಗಳೂರು ಜೈಲಿನ ಜಾಮರ್ ಸಮಸ್ಯೆ, ಇ–ಖಾತಾ ಸಮಸ್ಯೆ ಇನ್ನೂ ಬಗೆಹರಿಯದೆ ಉಳಿದಿದ್ದು, ಗೃಹಲಕ್ಷ್ಮಿ ಯೋಜನೆ ಕುರಿತು ಸರ್ಕಾರ ತಪ್ಪು ಮಾಹಿತಿ ನೀಡಿರುವುದು ಹಾಗೂ ಕದ್ರಿ ಪಾರ್ಕ್‌ನಲ್ಲಿ ಜನ ವಿರೋಧದ ನಡುವೆಯೂ ಪಾರ್ಕಿಂಗ್ ಶುಲ್ಕ ವಸೂಲಾತಿ ಆರಂಭಿಸಿರುವುದು ಕಾಂಗ್ರೆಸ್ ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಬಿಜೆಪಿ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪ್ರಮುಖರಾದ ಭಾಸ್ಕರ ಚಂದ್ರ ಶೆಟ್ಟಿ, ಉಪಸ್ಥಿತರಿದ್ದರು