ಮಂಗಳೂರು: ನೂತನವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್ ಕುಮಾರ್ ಅವರು ಮಂಗಳೂರಿನ ಸಬ್‌ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜೈಲಿನ ಭದ್ರತೆ, ಆಡಳಿತ ವ್ಯವಸ್ಥೆ, ಖೈದಿಗಳ ನಡತೆ ಹಾಗೂ ಮೊಬೈಲ್ ಬಳಕೆಯಂತಹ ಅಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಾನು ಈ ತಿಂಗಳ 11ರಂದು ಡಿಜಿಪಿಯಾಗಿ ಚಾರ್ಜ್ ಸ್ವೀಕರಿಸಿದ್ದೇನೆ. ರಾಜ್ಯದಲ್ಲಿ ಒಟ್ಟು 54 ಕಾರಾಗ್ರಹಗಳಿದ್ದು, ಎಲ್ಲವನ್ನು ಕಾಲಕಾಲಕ್ಕೆ ಪರಿಶೀಲಿಸುವ ಅಗತ್ಯವಿದೆ. ಮಂಗಳೂರು ಸಬ್‌ಜೈಲು ಸೂಕ್ಷ್ಮ ಕಾರಾಗ್ರಹವಾಗಿರುವುದರಿಂದ ಪರಿಶೀಲನೆಗಾಗಿ ಇಲ್ಲಿ ಬಂದಿದ್ದೇನೆ ಎಂದರು. ಈಗಾಗಲೇ ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ನಿಯಮಿತವಾಗಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಇತ್ತೀಚೆಗೆ ಜೈಲಿನೊಳಗೆ ಗಲಾಟೆ ನಡೆಸಿದ ಕೆಲವು ಖೈದಿಗಳನ್ನು ಬೇರೆ ಕಾರಾಗ್ರಹಗಳಿಗೆ ವರ್ಗಾವಣೆ ಮಾಡಲಾಗಿದೆ. ಇನ್ನೂ ಕೆಲವರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಣಕಾಸು ಅಥವಾ ಇತರ ಸಮಸ್ಯೆಗಳ ಕಾರಣದಿಂದ ಬಿಡುಗಡೆಯಾದರೂ ಜೈಲಲ್ಲೇ ಉಳಿದಿರುವ ಖೈದಿಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ಡಿಸ್ಟ್ರಿಕ್ಟ್ ಲೀಗಲ್ ಸರ್ವೀಸ್ ಅಥಾರಿಟಿ) ಮೂಲಕ ಬಿಡುಗಡೆಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು. ಉತ್ತಮ ನಡತೆ ತೋರಿಸುವ ಖೈದಿಗಳಿಗೆ ಸಹಕಾರ ನೀಡಲಾಗುವುದು, ಶಿಸ್ತುಭಂಗ ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜೈಲಿನೊಳಗೆ ಆಂಡ್ರಾಯ್ಡ್ ಹಾಗೂ ಕೀಪ್ಯಾಡ್ ಮೊಬೈಲ್‌ಗಳು ಹೇಗೆ ಪ್ರವೇಶಿಸುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೂರ್ಣ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಈಗಾಗಲೇ ಕೆಲವು ಜೈಲಿನಲ್ಲಿ ಟ್ರಯಲ್ ಬೇಸಿಸ್‌ನಲ್ಲಿ ಟ್ರೂಸನ್ ಡಿಟೆಕ್ಟಿವ್ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಪರಪ್ಪನ ಅಗ್ರಹಾರ ಹಾಗೂ ಮೈಸೂರಿನಲ್ಲಿ ಪ್ರಯೋಗ ನಡೆದಿದೆ. ಅದರ ಪರಿಣಾಮಕಾರಿತ್ವವನ್ನು ಅವಲೋಕಿಸಿ ಮಂಗಳೂರಿನಲ್ಲಿಯೂ ಅಳವಡಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. ಬೆಳಗಾವಿ, ಕಲಬುರ್ಗಿ ಹಾಗೂ ಬಳ್ಳಾರಿಯಲ್ಲಿಯೂ ಈ ತಂತ್ರಜ್ಞಾನ ಪ್ರಯೋಗ ನಡೆಯಲಿದೆ ಎಂದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗಾಗಲೇ ಎಐ ಆಧಾರಿತ ವ್ಯವಸ್ಥೆ ಅಳವಡಿಸಲಾಗಿದ್ದು, ಇನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.
ಜೈಲಿನ ಮೂಲಸೌಕರ್ಯ ಮತ್ತು ಭದ್ರತೆ ಕುರಿತು ಮಾತನಾಡಿದ ಡಿಜಿಪಿ, ಮುಡಿಪುವಿನ ನೂತನ ಜೈಲಿಗೂ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಲಾಗುವುದು. ಕೆಲ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳಬೇಕಿದೆ. ಈ ಸಂಬಂಧ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು. ಕಾರಾಗ್ರಹ ಇರುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಭದ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದ್ದು, ಮುಡಿಪುವಿನ ಜೈಲು ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಲು ಜನಪ್ರತಿನಿಧಿಗಳು ಸಹ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.

ಜಾಮರ್ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸಮಸ್ಯೆಯನ್ನು ಕಳೆದ 15 ವರ್ಷಗಳಿಂದಲೂ ಎದುರಿಸುತ್ತಿದ್ದೇವೆ. ಪರಪ್ಪನ ಅಗ್ರಹಾರದಲ್ಲಿಯೂ ಸಮಸ್ಯೆ ಇದ್ದು, ವಿವಿಧ ಕ್ರಮಗಳನ್ನ ಕೈಗೊಂಡರೂ ಇನ್ನೂ ಕೆಲವು ಲೋಪದೋಷಗಳು ಕಾಣಿಸುತ್ತಿವೆ ಎಂದರು. ಈ ಹಿನ್ನೆಲೆಯಲ್ಲಿ ಟೆಲಿಕಮ್ಯೂನಿಕೇಶನ್ ಕಂಪನಿಗಳು ಹಾಗೂ ಡಿಪಾರ್ಟ್‌ಮೆಂಟ್ ಆಫ್ ಟೆಲಿಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಟವರ್ ಹಾಗೂ ಕಾಲ್ ಬ್ಲಾಕಿಂಗ್ ವ್ಯವಸ್ಥೆಗಳ ಪರಿಣಾಮಕಾರಿತ್ವ ಹೆಚ್ಚಿಸಲು ಅವರಿಗೆ ಕಾಲಾವಕಾಶ ನೀಡಲಾಗಿದೆ. ಸಮಗ್ರ ಪರಿಹಾರ ನೀಡುವ ಭರವಸೆ ದೊರೆತಿದೆ ಎಂದರು.

ಪರಿಶೀಲನೆ ವೇಳೆ ರಾತ್ರಿ ಸ್ಟಾಪ್ ಶರಣ್ ಬಸಪ್ಪ ಅವರಿಗೆ ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ತಿಳಿಸಿದ ಅವರು, ಕಾಲಕಾಲಕ್ಕೆ ಸರ್ಚ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು. ಪೊಲೀಸ್ ಆಯುಕ್ತ, ಲಾ ಅಂಡ್ ಆರ್ಡರ್ ಉಪ ಆಯುಕ್ತ, ಡಿಸಿಪಿ ಕ್ರೈಂ ಹಾಗೂ ದಕ್ಷಿಣ ಕನ್ನಡ ಎಸ್‌ಪಿ ಅವರು ನಿಯಮಿತವಾಗಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಮಂಗಳೂರು ಇಲ್ಲಿಗೆ ಸಾಕಷ್ಟು ಗದ್ದಲ ಮಾಡಿದವರೇ ಬರುವವರು, ಇನ್ನು ಕೆಲವರು ನಾನ್ ಬೇಲೇಬಲ್ ಆಗಿ ಜೈಲ್‌ನಲ್ಲಿ ಖೈದಿಗಳಾಗಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಇವರನ್ನು ನಿಯಂತ್ರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್‌ಪಿ ಡಾ. ಅರುಣ್ ಕುಮಾರ್, ಡಿಸಿಪಿ ಮಿಥುನ್ ಮತ್ತಿತರರ ಪೊಲೀಸ್ ಅಧಿಕಾರಿಗಳಿದ್ದರು.