ಮುಂಬೈ: ದೇಶೀಯ ಕ್ರಿಕೆಟ್ ನ ಮಹಿಳಾ ಆಟಗಾರರ ಸಂಭಾವನೆಯನ್ನು ಬಿಸಿಸಿಐ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಹಿರಿಯ ಮತ್ತು ಕಿರಿಯ ಆಟಗಾರರ ಸಂಭಾವನೆಯಲ್ಲಿ ಎರಡೂವರೆ ಪಟ್ಟು ಹೆಚ್ಚಳವನ್ನು ಮುಂಬೈನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ಘೋಷಿಸಿದೆ.

ಈ ಹಿಂದೆ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಹಿರಿಯ ಮಹಿಳಾ ಆಟಗಾರ್ತಿಯರಿಗೆ ದಿನಕ್ಕೆ 20,000 ರೂ. ಪಂದ್ಯ ಶುಲ್ಕ ನೀಡಲಾಗುತ್ತಿತ್ತು, ಇನ್ನು ಮುಂದೆ 50,000 ರೂ. ಪಂದ್ಯ ಶುಲ್ಕ ಸಿಗಲಿದೆ. ಆಡುವ ಹನ್ನೊಂದರ ಬಳಗದಲ್ಲಿ ಇಲ್ಲದ ಮೀಸಲು ಆಟಗಾರ್ತಿಯರ ಪಂದ್ಯ ಶುಲ್ಕವನ್ನು 10,000 ರೂ.ನಿಂದ 25,000 ರೂ.ಗೆ ಹೆಚ್ಚಿಸಲಾಗಿದೆ.
ಬಿಸಿಸಿಐ ಹಿರಿಯ ಆಟಗಾರ್ತಿಯರ ಪಂದ್ಯ ಶುಲ್ಕ ಹೆಚ್ಚಳಕ್ಕೆ ಅನುಗುಣವಾಗಿ, ಆಡುವ ಹನ್ನೊಂದರ ಬಳಗದಲ್ಲಿರುವ ಕಿರಿಯ ಆಟಗಾರ್ತಿಯರಿಗೆ ದಿನಕ್ಕೆ 10,000 ರೂ. ಇದ್ದ ಪಂದ್ಯ ಶುಲ್ಕವನ್ನು 25,000 ರೂ.ಗೆ ಮತ್ತು ಮೀಸಲು ಆಟಗಾರ್ತಿಯರ ಪಂದ್ಯ ಶುಲ್ಕವನ್ನು 5,000 ರೂ.ನಿಂದ 12,500 ರೂ.ಗೆ ಏರಿಸಲಾಗಿದೆ.
ಟಿ20 ಪಂದ್ಯಗಳಲ್ಲಿ ಹಿರಿಯ ಆಟಗಾರ್ತಿಯರಿಗೆ, ಆಡುವ ಹನ್ನೊಂದರ ಬಳಗದಲ್ಲಿರುವವರಿಗೆ 25,000 ರೂ. ಮತ್ತು ಮೀಸಲು ಆಟಗಾರ್ತಿಯರಿಗೆ 12,500 ರೂ. ಪಂದ್ಯ ಶುಲ್ಕ ಸಿಗಲಿದೆ. ಕಿರಿಯ ಆಟಗಾರ್ತಿಯರಿಗೆ ಟಿ20 ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿರುವವರಿಗೆ 12,500 ರೂ. ಮತ್ತು ಮೀಸಲು ಆಟಗಾರ್ತಿಯರಿಗೆ 6,250 ರೂ. ಪಂದ್ಯ ಶುಲ್ಕವಾಗಿ ಸಿಗಲಿದೆ.
ಇದಕ್ಕೂ ಮುನ್ನ 2021ರಲ್ಲಿ ದೇಶೀಯ ಕ್ರಿಕೆಟ್ ಆಡುವ ಮಹಿಳಾ ಆಟಗಾರ್ತಿಯರ ಸಂಭಾವನೆಯನ್ನು ಹೆಚ್ಚಿಸಲಾಗಿತ್ತು.