ಉಡುಪಿ: ಮಲ್ಪೆ ಕೊಚ್ಚಿನ್ ಶಿಪ್ಯಾರ್ಡ್‌ನ ನೌಕರರು ಭಾರತದ ನೌಕಾಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಅನಧಿಕೃತವಾಗಿ ಹಂಚಿಕೊಂಡು ಅಕ್ರಮ ಲಾಭ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಡುಪಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಗುಜರಾತ್ ರಾಜ್ಯದ ಆನಂದ ತಾಲೂಕಿನ ಕೈಲಾಸ್ ನಗರಿಯ ನಿವಾಸಿ, ಹೀರೇಂದ್ರ ಕುಮಾರ್ ಯಾನೆ ಭರತ್ ಕುಮಾರ್ ಖಡಯಾತ(31) ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕಳೆದ ನವೆಂಬರ್ 21ರಂದು ಉತ್ತರ ಪ್ರದೇಶದ ರೋಹಿತ್ ಹಾಗೂ ಸಂತ್ರಿ ಎಂಬವರನ್ನು ಪೊಲೀಸರು ಬಂಧಿಸಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ತನಿಖೆ ಮುಂದುವರಿದಿರುವ ಸಂದರ್ಭದಲ್ಲಿ, ಆರೋಪಿಗಳಿಗೆ ಮೊಬೈಲ್ ಸಿಮ್ ಒದಗಿಸಿದ ಆಧಾರದ ಮೇಲೆ ಹೀರೇಂದ್ರ ಕುಮಾರ್‌ನ ಪಾತ್ರ ಬೆಳಕಿಗೆ ಬಂದಿದ್ದು, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ಅವರ ನೇತೃತ್ವದ ತನಿಖಾ ತಂಡ ಆತನನ್ನು ಬಂಧಿಸಿದೆ.
ಆರೋಪಿ ಹಣಕಾಸಿನ ಲಾಭಕ್ಕಾಗಿ ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್‌ಗಳನ್ನು ಪಡೆದು, ಅವುಗಳನ್ನು ಈ ಪ್ರಕರಣದ ಇತರ ಆರೋಪಿಗಳಿಗೆ ನೀಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಬಂಧಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.