ಕಾಸಗೋಡು: ರೈಲ್ವೆ ಹಳಿಯ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಇಟ್ಟ ದುಷ್ಕರ್ಮಿಗಳು!: ತಪ್ಪಿದ ಭಾರೀ ದುರಂತ

ಕಾಸರಗೋಡು: ಇಲ್ಲಿನ ಪಾಲಕುನ್ನು ರೈಲ್ವೆ ಹಳಿಯ ಮೇಲೆ ದುಷ್ಕರ್ಮಿಗಳು ಕಾಂಕ್ರೀಟ್ ಸ್ಲ್ಯಾಬ್ ಇಟ್ಟಿದ್ದು, ಈ ಬಗ್ಗೆ ಬೇಕಲ್ ಪೊಲೀಸರು ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಂಯುಕ್ತವಾಗಿ ತನಿಖೆ ಆರಂಭಿಸಿದ್ದಾರೆ. ಘಟನೆಯ ಮುನ್ನವೇ, ರಾತ್ರಿ 8.16ಕ್ಕೆ ಗೂಡ್ಸ್ ರೈಲು ಈ ಮಾರ್ಗವಾಗಿ ಹಾದುಹೋಗಿರುವುದು ತಿಳಿದುಬಂದಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ. ಈ ಕುರಿತು ಕೊಟ್ಟಿಕುಲಂ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಟಿ. ಮುಹಮ್ಮದ್ ಫಯಾಜ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶನಿವಾರ ರಾತ್ರಿ ಸುಮಾರು 8.30ರ ವೇಳೆಗೆ, ಕೊಟ್ಟಿಕುಲಂ ರೈಲು ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್‌ನ ದಕ್ಷಿಣ ಭಾಗದಲ್ಲಿ ಹಳಿಯ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಪತ್ತೆಯಾಗಿದೆ. ಈ ಸ್ಲ್ಯಾಬ್ ರೈಲ್ವೆಯ ಅಗತ್ಯಕ್ಕಾಗಿ ಹಳಿಯ ಸಮೀಪ ಇರಿಸಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್‌ಗಳೊಂದರ ಭಾಗವಾಗಿತ್ತು ಎಂದು ತಿಳಿದುಬಂದಿದೆ. ಘಟನೆ ಗಮನಕ್ಕೆ ಬಂದ ತಕ್ಷಣ ರೈಲ್ವೆ ಅಧಿಕಾರಿಗಳು ಹಳಿಯ ಮೇಲಿದ್ದ ಸ್ಲ್ಯಾಬ್ ಅನ್ನು ತೆರವುಗೊಳಿಸಿದರು.

ಕೊಟ್ಟಿಕುಲಂ ರೈಲು ನಿಲ್ದಾಣದ ಬಳಿಯಿರುವ ರೈಲ್ವೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪ್ರವೀಣ್ ಹಾಗೂ ಅವರ ಸ್ನೇಹಿತ ಮುತಿಯಕ್ಕಲ್ ನಿವಾಸಿ ಮುಹಮ್ಮದ್ ಶಾನಿದ್ ಅವರು ಹಳಿಯ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಗಮನಿಸಿ ಕೂಡಲೇ ಘಟನೆಯ ಕುರಿತು ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷವೂ ಚಿರಮ್ಮಲ್ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಮರದ ದಿಮ್ಮಿಗಳನ್ನು ಇರಿಸಿದ ಘಟನೆ ವರದಿಯಾಗಿದ್ದು, ಈ ರೀತಿಯ ಘಟನೆಗಳು ರೈಲ್ವೆ ಸುರಕ್ಷತೆಯ ಕುರಿತು ಆತಂಕ ಹೆಚ್ಚಿಸಿವೆ.

error: Content is protected !!