ಉಪ್ಪಿನಂಗಡಿ: ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಅಂಬ್ಯುಲೆನ್ಸ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಕಳ ನಿವಾಸಿ ಶೋದನ್ (22) ಬಂಧಿತ ಆರೋಪಿ.

ಕಡಬ ತಾಲೂಕು ಶಿರಾಡಿ ನಿವಾಸಿ ಸುರೇಶ್ (46) ಎಂಬವರ ದೂರಿನಂತೆ, ಅವರು ಅಂಬ್ಯುಲೆನ್ಸ್ ವಾಹನ ಸಂಖ್ಯೆ KA-19-C-7557ರ ಚಾಲಕರಾಗಿದ್ದು, ಪ್ರತಿದಿನದಂತೆ ದಿನಾಂಕ ಡಿ.19ರಂದು ರಾತ್ರಿ ಗುಂಡ್ಯ ಚೆಕ್‌ಪೋಸ್ಟ್ ಬಳಿ ಅಂಬ್ಯುಲೆನ್ಸ್ ನಿಲ್ಲಿಸಿ ಲಾಕ್ ಮಾಡಿ ಮನೆಗೆ ತೆರಳಿದ್ದರು. ತುರ್ತು ಸಂದರ್ಭಗಳಲ್ಲಿ ಬದಲಿ ಚಾಲಕರಿಗೆ ಅನುಕೂಲವಾಗುವಂತೆ ಅಂಬ್ಯುಲೆನ್ಸ್ ಕೀಯನ್ನು ವಾಹನದಲ್ಲೇ ಇಟ್ಟು ಹೋಗಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಮರುದಿನ ಡಿ.20ರಂದು ಬೆಳಿಗ್ಗೆ ಮನೆಯಿದ ವಾಪಸ್ಸಾಗಿ ಅಂಬ್ಯುಲೆನ್ಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ವಾಹನ ಕಾಣೆಯಾಗಿರುವುದು ತಿಳಿದುಬಂದಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 117/2025, ಕಲಂ 303(2) ಬಿಎನ್‌ಎಸ್ 2023ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು. ತನಿಖೆಯ ವೇಳೆ ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಶೋದನ್‌ನನ್ನು ಹಾಸನದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವಾಗಿದ್ದ ಅಂಬ್ಯುಲೆನ್ಸ್‌ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.