ಮಂಗಳೂರು: ಶಾಂತಿ ಹಾಗೂ ಸೌಹಾರ್ದತೆಯ ಮಹತ್ವ ಸಮಾಜಕ್ಕೆ ಇನ್ನಷ್ಟು ಅರಿವಾಗಬೇಕಾದರೆ ‘ಗ್ರಾಮೋತ್ಸವ’ ಕಾರ್ಯಕ್ರಮಗಳು ಪ್ರತೀ ಗ್ರಾಮದಲ್ಲಿಯೂ ನಡೆಯಬೇಕು. ಇದರ ಮಹತ್ವವನ್ನು ಊರಿನ ಜನರು ಹಾಗೂ ಶಾಲಾ ಮಕ್ಕಳಿಗೆ ತಿಳಿಸಬೇಕಾಗಿದೆ. ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕೀಯ ಇರಲಿ; ಉಳಿದ ಸಮಯದಲ್ಲಿ ಗ್ರಾಮಾಭಿವೃದ್ಧಿಗೆ ಒತ್ತು ನೀಡಬೇಕು. ಮಹಾತ್ಮ ಗಾಂಧೀಜಿ ಆಶಯದಂತೆ ಅವರ ಗ್ರಾಮಸ್ವರಾಜ್ಯ ಪರಿಕಲ್ಪನೆಯಡಿ ಗ್ರಾಮಗಳು ಅಭಿವೃದ್ಧಿಯಾಗಬೇಕೆಂದು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಹೇಳಿದರು.

ಅಡ್ಯಾರು ಗ್ರಾಮ ಪಂಚಾಯತ್‌ನ ಪ್ರಕೃತಿ ಸಂಜೀವಿನಿ ಒಕ್ಕೂಟ ಹಾಗೂ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಸಂಯುಕ್ತ ಆಶ್ರಯದಲ್ಲಿ ಡಿ.20ರಂದು ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ‘ಅಡ್ಯಾರು ಗ್ರಾಮೋತ್ಸವ–2025’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾತು ಮುಂದುವರಿಸಿದ ಅವರು, ರಾಜ್ಯದ ಹಲವು ಗ್ರಾಮಗಳಲ್ಲಿ ಗ್ರಾಮೋತ್ಸವಗಳು ನಡೆಯುತ್ತಿವೆ. ಆದರೆ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್ ಅವರು ಇಚ್ಛಾಶಕ್ತಿ ತೋರಿಸಿ ಕಾಲೇಜು ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಎಲ್ಲರೂ ಸೇರಿ ಕಾರ್ಯಕ್ರಮ ಮಾಡಬೇಕು ಎನ್ನುವುದೇ ನಮ್ಮ ಆಶಯ. ಮುಂದಿನ ಬಾರಿ ಇನ್ನೂ ಅದ್ಧೂರಿಯಾಗಿ, ಮಕ್ಕಳಿಗೆ ರಜೆ ಇಲ್ಲದ ಸಮಯದಲ್ಲಿ ಗ್ರಾಮೋತ್ಸವವನ್ನು ಆಯೋಜಿಸೋಣ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಡ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೌಹಾರ್ದತೆ ಹಾಗೂ ಸಾಮರಸ್ಯದ ಉದ್ದೇಶದಿಂದ ಗ್ರಾಮೋತ್ಸವವನ್ನು ಆಯೋಜಿಸಲಾಗಿದೆ. ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ. ಇದು ಕಡಿಮೆ ಅವಧಿಯಲ್ಲಿ ಮಾಡಿದ ಕೆಲಸವಾಗಿದ್ದರೂ, ಶ್ರಮ ಹಾಗೂ ಇಚ್ಛಾಶಕ್ತಿಯಿಂದ ಮಾಡಿದರೆ ಯಾವುದೇ ಕೆಲಸ ಯಶಸ್ವಿಯಾಗುತ್ತದೆ ಎಂಬುದಕ್ಕೆ ಗ್ರಾಮೋತ್ಸವವೇ ಸಾಕ್ಷಿ. ‘ದ್ವೇಷ ಸಾಯಲಿ, ಪ್ರೀತಿ ಅರಳಲಿ’ ಎಂಬ ಸಂದೇಶದೊಂದಿಗೆ ಶಾಂತಿ, ಸಹಬಾಳ್ವೆ ನಮ್ಮ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಹೇಳಿದರು.

ನಾಡಗೀತೆಯೊಂದಿಗೆ ಸಮಾರೋಪ ಸಮಾರಂಭಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಊರಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಗ್ರಾಮ ವ್ಯಾಪ್ತಿಯ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಿಟಿ ಗೋಲ್ಡ್ ವತಿಯಿಂದ ಲಕ್ಕಿ ಡ್ರಾ ಕಾರ್ಯಕ್ರಮವೂ ನಡೆಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸುರೇಂದ್ರ ಜಿ. ಕಂಬಳಿ, ಅಡ್ಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಝೋಹರಾ, ಧರ್ಮದರ್ಶಿ ವಜ್ರನಾಥ ಶೆಟ್ಟಿ, ಓವರ್‌ಟೈಂ ಐಸ್‌ಕ್ರೀಂ ನಿರ್ದೇಶಕ ಗಿರೀಶ್ ರಮಾನಾಥ ರೈ, ಪಾಲನಾ ಮಂಡಳಿ ಸಂತ ಜೋಸೆಫರ ಕಾರ್ಮಿಕ ದೇವಾಲಯದ ಉಪಾಧ್ಯಕ್ಷ ಸಂದೀಪ್ ಮಿಸ್ಕಿತ್, ಅಡ್ಯಾರ್ ವೀರಾಂಜನೇಯ ದೇವಸ್ಥಾನದ ಅಧ್ಯಕ್ಷ ರಮೇಶ್ ತುಂಬೆ, ಸಿಟಿ ಗೋಲ್ಡ್ ಗ್ರೂಪ್ ನಿರ್ದೇಶಕ ದಿಲ್‌ಶಾದ್, ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮಿ ಚಂದ್ರಹಾಸ, ನರೇಗಾದ ಮಹೇಶ್ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಪಿಡಿಓ ಅಬ್ದುಲ್ ಅಶಫ್ ಸ್ವಾಗತಿಸಿದರು. ಅಡ್ಯಾರು ಪಂಚಾಯತ್‌ನ ಆಶಾ ಹಾಗೂ ಸಹ್ಯಾದ್ರಿ ಕಾಲೇಜಿನ ಮಾನಸ ಅವರು ಕಾರ್ಯಕ್ರಮ ನಿರೂಪಿಸಿದರು.