ಪುತ್ತೂರು: ಸಾರ್ವಜನಿಕ ರಸ್ತೆಗೆ ಹೊಂದಿಕೊಂಡು ಅನಧಿಕೃತವಾಗಿ ಕಟ್ಟೆ ನಿರ್ಮಿಸಿ, ಅದಕ್ಕೆ ಧಾರ್ಮಿಕ ಧ್ವಜ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣದ ದೂರುದಾರರು ಪುತ್ತೂರು ಮುಂಡೂರು ಗ್ರಾಮ ಪಂಚಾಯತ್ತಿನ ಸರ್ಕಾರಿ ನೌಕರರಾಗಿದ್ದು, ಅವರ ಕಾರ್ಯವ್ಯಾಪ್ತಿಗೆ ಒಳಪಡುವ ಪುತ್ತೂರು ತಾಲೂಕು, ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.

ಸಾರ್ವಜನಿಕ ರಸ್ತೆಗೆ ಹೊಂದಿಕೊಂಡು 2017ರ ಸೆಪ್ಟೆಂಬರ್ ತಿಂಗಳಲ್ಲಿ ತ್ರಿಕೋನಾಕಾರದ ಅನಧಿಕೃತ ಕಟ್ಟೆ ನಿರ್ಮಾಣವಾಗಿದ್ದು, ಈ ವೇಳೆ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅಂದಿನ ಪಂಚಾಯತ್ ಹಾಗೂ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರಿಗೆ ತಿಳುವಳಿಕೆ ನೀಡಿ, ಕಟ್ಟೆಯನ್ನು ತೆರವುಗೊಳಿಸುವಂತೆ ಸೂಚಿಸಿದ್ದರು.
ಆದರೆ ಅನಧಿಕೃತ ಕಟ್ಟೆಯನ್ನು ತೆರವುಗೊಳಿಸಲಾಗಿರಲಿಲ್ಲ. ಇತ್ತೀಚೆಗೆ ಅದೇ ಕಟ್ಟೆಯಲ್ಲಿ ಮರದ ಕಂಬವನ್ನು ನೆಟ್ಟು, ಅದಕ್ಕೆ ಧಾರ್ಮಿಕ ಧ್ವಜವನ್ನು ಅಳವಡಿಸಿರುವ ಬಗ್ಗೆ ಅವರಿಗೆ ಡಿ.16ರಂದು ಸಾರ್ವಜನಿಕರಿಂದ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಈ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ಅದೇ ರಸ್ತೆಬದಿಯಲ್ಲಿ ಕಟ್ಟೆ ಮುಂದುವರಿದಿರುವುದಲ್ಲದೇ, ಅದರ ಮೇಲೆ ಧ್ವಜ ಅಳವಡಿಸಿರುವುದು ದೃಢಪಟ್ಟಿತ್ತು.
ಇದರಿಂದಾಗಿ ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದನ್ನು ಗಮನಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಡಿ.ರಂದು ಅನಧಿಕೃತ ಕಟ್ಟೆಯನ್ನು ತೆರವುಗೊಳಿಸಲಾಗಿತ್ತು. ಅಲ್ಲದೆ ಯಾವುದೇ ಅಧಿಕೃತ ಪರವಾನಿಗೆ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಕಟ್ಟೆ ನಿರ್ಮಿಸಿ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ರೀತಿಯಲ್ಲಿ ವರ್ತಿಸಿರುವವರ ವಿರುದ್ಧ ದೂರಿನ ಮೇರೆಗೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 147/2025ನ್ನು ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 270 ಹಾಗೂ ಕರ್ನಾಟಕ ಓಪನ್ ಪ್ಲೇಸ್ ಡಿಸ್ಫಿಗರ್‌ಮೆಂಟ್ ಕಾಯ್ದೆ(ಕರ್ನಾಟಕ ಸಾರ್ವಜನಿಕ ಸ್ಥಳ ವಿಕೃತೀಕರಣ (ನಿಷೇಧ) ಕಾಯ್ದೆ) 1951 ಮತ್ತು 1981ರ ಕಲಂ 3ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪೊಲೀಸರು ತಿಳಿಸಿರುವಂತೆ, 2017ರಲ್ಲಿ ಚುನಾವಣೆ ಪೂರ್ವ ಅವಧಿಯಲ್ಲಿ ಈ ಅನಧಿಕೃತ ಕಟ್ಟೆ ನಿರ್ಮಾಣವಾಗಿದ್ದು, ನಂತರ ಯಾವುದೇ ಹೆಚ್ಚುವರಿ ಚಟುವಟಿಕೆಗಳು ನಡೆದಿರಲಿಲ್ಲ. ಇತ್ತೀಚೆಗೆ ರಾಜಕೀಯ ಉದ್ದೇಶಗಳಿಂದ ಚಟುವಟಿಕೆಗಳು ನಡೆದಿವೆ ಎಂಬ ಆರೋಪಗಳೂ ಕೇಳಿಬಂದಿದ್ದು, ಆ ಅಂಶದ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.