ಮಂಗಳೂರು: ಕೆನರಾ ಎಂಜಿನಿಯರಿಂಗ್ ಕಾಲೇಜ್ (CEC) ಬೆಂಜನಪದವು ಇದರ ಆಯೋಜನೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ವಿಜ್ಞಾನ ಉತ್ಸವ ‘ಟೆಕ್ನೋವಾ 2025’ ಯಶಸ್ವಿಯಾಗಿ ನಡೆಯಿತು. ವಿವಿಧ ಪಿಯು ಕಾಲೇಜುಗಳಿಂದ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಏಕದಿನ ಉತ್ಸವದಲ್ಲಿ ನವೀನತೆ, ಸೃಜನಶೀಲತೆ ಹಾಗೂ ಪ್ರಾಯೋಗಿಕ ಕಲಿಕೆಗೆ ಪ್ರಾಶಸ್ತ್ಯ ನೀಡುವ ವಿವಿಧ ಸ್ಪರ್ಧೆಗಳು, ಕಾರ್ಯಾಗಾರಗಳು ಮತ್ತು ಕ್ಯಾಂಪಸ್ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಕೆನರಾ ಪದವಿಪೂರ್ವಕಾಲೇಜ್, ಶಾರದಾ ಪಿ ಯು ಕಾಲೇಜ್ ಮತ್ತು ಕಾರ್ಮೆಲ್ ಕಾಂಪೊಸಿಟ್ ಪಿಯು ಕಾಲೇಜ್ ಮೊಡಂಕಾಪು ಇಲ್ಲಿಯ ಉಪನ್ಯಾಸಕ ಪ್ರತಿನಿಧಿಗಳು ಡಿಜಿಟಲ್ ಬಟನ್ ಕ್ಲಿಕ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕೆನರಾ ಹೈ ಸ್ಕೂಲ್ ಅಸೋಸಿಯೇಶನ್‌ನ ಮಾನ್ಯ ಕಾರ್ಯದರ್ಶಿ ಶ್ರೀ ಎಂ. ರಂಗನಾಥ ಭಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಸೂಕ್ತವಾದ ಉದ್ಯೋಗ,ವಿದ್ಯಾಭ್ಯಾಸದ ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದರು. CEC ಯ ಧ್ಯೇಯ, ಗುರಿ ಹಾಗೂ ಭವಿಷ್ಯದ ಅಕಾಡೆಮಿಕ್ ಆವಿಷ್ಕಾರಗಳ ಬಗ್ಗೆ ವಿವರಿಸುತ್ತಾ ವಿದ್ಯಾರ್ಥಿ–ಕೇಂದ್ರಿತ ಬೆಳವಣಿಗೆಯ ಕಡೆ ಸಂಸ್ಥೆಯ ಬದ್ಧತೆಯನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ನಾಗೇಶ್ ಎಚ್. ಆರ್., ಉಪ ಪ್ರಾಚಾರ್ಯ ಡಾ. ಡೆಮಿಯನ್ ಆಂಟನಿ ಡಿ’ಮೆಲ್ಲೋ .ಉಪಸ್ಥಿತರಿದ್ದರು. ಕೆನರಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಕುರಿತ ಕಿರುಚಿತ್ರ ಹಾಗೂ ಕಾಲೇಜಿನ ಸೌಲಭ್ಯಗಳ ವೀಕ್ಷಣೆಯೊಂದಿಗೆ ಕಾರ್ಯಕ್ರಮದ ಶುಭಾರಂಭ ನಡೆಯಿತು.
ಟೆಕ್ನೋವಾ 2025 ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆ, ಕ್ವಿಜ್ ಸ್ಪರ್ಧೆ, ಶಾರ್ಕ್ ಟ್ಯಾಂಕ್ (ಸ್ಟಾರ್ಟ್‌ಅಪ್ ಪಿಚಿಂಗ್), BGMI ಟೂರ್ನಮೆಂಟ್, ರೀಲ್ ಮೇಕಿಂಗ್ ಮತ್ತು ಟ್ರೆಷರ್ ಹಂಟ್, ಮೆಷಿನ್ ಲರ್ನಿಂಗ್, ಪೈಥನ್ (ಹ್ಯಾಂಡ್ಸ್–ಆನ್), ವೆಬ್ ಅಪ್ಲಿಕೇಶನ್‌ಗಳು, ಲೈನ್–ಫಾಲೋವರ್ ರೋಬೋಟ್ ಮತ್ತು ಪವರ್ BI ಎಂಬ ಐದು ತಾಂತ್ರಿಕ ಕಾರ್ಯಾಗಾರಗಳಲ್ಲಿ ವಿದ್ಯಾರ್ಥಿಗಳು ನವೀನ ತಂತ್ರಜ್ಞಾನ ಕ್ಷೇತ್ರಗಳ ಪ್ರಾಯೋಗಿಕ ಅನುಭವಪಡೆದರು.
ಡಾ. ಅಭಿಷೇಕ್ ಎಸ್. ರಾವ್ (ISE), ಡಾ. ಬಸಪ್ಪ ಕೊಡಾದ (AIML), ಮತ್ತು ಪ್ಲೇಸ್ ಮೆಂಟ್ ಅಧಿಕಾರಿ ಶ್ರೀ ಕೀರ್ತನ್ ಕಿಣಿ ಇವರು ಕ್ಯಾರಿಯರ್ ಓರಿಯಂಟೇಶನ್ ಸೆಷನ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕೆಲವು CEC ವಿದ್ಯಾರ್ಥಿಗಳು ಅಕಾಡೆಮಿಕ್ಸ್, ಕ್ಯಾಂಪಸ್ ಸಂಸ್ಕೃತಿ ಹಾಗೂ ಇಂಜಿನಿಯರಿಂಗ್ ಕ್ಷೇತ್ರದ ಅವಕಾಶಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಇಂಕ್ಯುಬೇಶನ್ ಸೆಂಟರ್‌ನಲ್ಲಿ ನೈಜ ಜಗತ್ತಿನ ಆವಿಷ್ಕಾರಗಳ ಬಗೆಗೆ CEC ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ಪ್ರಾಜೆಕ್ಟ್ ಪ್ರದರ್ಶನವು ವಿಶೇಷ ಮೆಚ್ಚುಗೆ ಪಡೆಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದದವರಿಗೆ ಅನುಭವ ಹಂಚಿಕೆಗೆ ವೇದಿಕೆ ಕಲ್ಪಿಸಲಾಗಿತ್ತು. ಕಾಲೇಜಿನ ಪ್ರಾಚಾರ್ಯ ಡಾ. ನಾಗೇಶ್ ಎಚ್. ಆರ್. ಅವರು ಬಹುಮಾನಗಳು ಹಾಗೂ ಸ್ಮರಣಿಕೆಗಳನ್ನು ವಿತರಿಸಿ ಯುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ವೇದಿಕೆಗಳನ್ನೊದಗಿಸುವಲ್ಲಿ ಸಂಸ್ಥೆಯ ನಿಷ್ಠೆ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದರು. ಉತ್ಸಾಹಪೂರ್ಣ zumba ಸೆಷನ್‌ನೊಂದಿಗೆ ದಿನದ ಕಾರ್ಯಕ್ರಮಗಳು ಸಂಭ್ರಮದಿಂದ ಕೊನೆಗೊಂಡವು.
ಕಾರ್ಯಕ್ರಮದ ನಿರೂಪಣೆಯನ್ನು ಮಿಸ್ ಕ್ಯಾರಲ್ ಡಿ’ಮೆಲ್ಲೋ ನಿರ್ವಹಿಸಿದರು.