ಕೊನೆಗೂ ಜೈಲಿನಿಂದ ಬಿಡುಗಡೆಗೊಂಡ ಮಾಸ್ಕ್‌ ಮ್ಯಾನ್ ಚಿನ್ನಯ್ಯ

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮಾಸ್ಕ್‌ ಮ್ಯಾನ್’ ಎಂದೇ ಗುರುತಿಸಿಕೊಂಡಿರುವ ಚಿನ್ನಯ್ಯ ಅವರಿಗೆ ಕೊನೆಗೂ ಜೈಲಿನಿಂದ ಬಿಡುಗಡೆ ದೊರೆತಿದೆ.

ನವೆಂಬರ್ 24ರಂದು ಬೆಳ್ತಂಗಡಿ ಕೋರ್ಟ್‌ ಚಿನ್ನಯ್ಯಗೆ ಜಾಮೀನು ಮಂಜೂರು ಮಾಡಿದ್ದರೂ, ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಶ್ಯೂರಿಟಿ ನೀಡಲು ಯಾರೂ ಮುಂದೆ ಬರದ ಕಾರಣ  23 ದಿನಗಳ ಕಾಲ ಶಿವಮೊಗ್ಗ ಜೈಲಿನಲ್ಲೇ ಉಳಿಯಬೇಕಾಯಿತು.

ಇಂದು ಚಿನ್ನಯ್ಯನ ಪತ್ನಿ ಮಲ್ಲಿಕಾ ಒಂದು ಲಕ್ಷ ರೂ. ಬಾಂಡ್ ಸಲ್ಲಿಸಿ, ಇಬ್ಬರು ಜಾಮೀನುದಾರರು ಮತ್ತು ಒಬ್ಬ ಶ್ಯೂರಿಟಿದಾರರ ಮೂಲಕ ಕೋರ್ಟ್‌ಗೆ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ. ಇದನ್ನು ಪರಿಗಣಿಸಿದ ನ್ಯಾಯಾಲಯ ಚಿನ್ನಯ್ಯನ ಬಿಡುಗಡೆಗೆ ಆದೇಶ ನೀಡಿದೆ. ಕೋರ್ಟ್ ಆದೇಶದೊಂದಿಗೆ ಮಲ್ಲಿಕಾ ಹಾಗೂ ಚಿನ್ನಯ್ಯನ ಸಹೋದರಿ ರತ್ನ ಅವರು ಶಿವಮೊಗ್ಗ ಜೈಲಿಗೆ ತೆರಳಿದ್ದು, ಇಂದು ಸಂಜೆ ವೇಳೆಗೆ ಚಿನ್ನಯ್ಯ ಬಿಡುಗಡೆಯಾಗಿದ್ದಾರೆ.

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನನ್ನು ಆಗಸ್ಟ್ 23ರಂದು ಬಂಧಿಸಲಾಗಿದ್ದು, ಸೆಪ್ಟೆಂಬರ್ 6ರಂದು ನ್ಯಾಯಾಂಗ ಬಂಧನ ವಿಧಿಸಿ ಶಿವಮೊಗ್ಗ ಜೈಲಿಗೆ ವರ್ಗಾಯಿಸಲಾಗಿತ್ತು. ಜೈಲಿನಲ್ಲಿ ಇರುವ ಅವಧಿಯಲ್ಲಿ ಚಿನ್ನಯ್ಯ ಹೆಚ್ಚು ಮಾತನಾಡದೆ ಮೌನಕ್ಕೆ ಶರಣಾಗಿದ್ದರು ಎನ್ನಲಾಗಿದೆ.

ಜೈಲಿನಿಂದ ಹೊರಬಂದ ಬಳಿಕ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಯಾವುದೇ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸುತ್ತಾರೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

error: Content is protected !!