ನವದೆಹಲಿ: ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿದ್ದ ಚಾರ್ಜ್‌ಶೀಟ್ ಅನ್ನು ಪರಿಗಣಿಸಲು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ನಿರಾಕರಿಸಿದೆ.

ಈ ಪ್ರಕರಣವನ್ನು ವಿಚಾರಿಸಿದ ವಿಶೇಷ ನ್ಯಾಯಮೂರ್ತಿ ವಿಶಾಲ್ ಗೋಗಾನೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಸಲ್ಲಿಸಿರುವ ಆರೋಪಪಟ್ಟಿ ವಿಚಾರಣೆಗೆ ಅರ್ಹವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇಡಿ ತನಿಖೆಯನ್ನು ಮುಂದುವರೆಸಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಏಪ್ರಿಲ್ 9ರಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಪಿಎಂಎಲ್‌ಎ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆದರೆ, ಈ ಪ್ರಕರಣವು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಆಧಾರಿತವಾಗಿರದೆ ಖಾಸಗಿ ದೂರಿನ ಮೇರೆಗೆ ದಾಖಲಾದ ಪ್ರಕರಣವಾಗಿರುವುದರಿಂದ ಇಡಿ ಸಲ್ಲಿಸಿದ ದೂರು ವಿಚಾರಣೆಗೆ ತಕ್ಕುದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಗಾಂಧಿ ಕುಟುಂಬದ ಸದಸ್ಯರೊಂದಿಗೆ ಜೊತೆಗೆ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಹಾಗೂ ಸುನಿಲ್ ಭಂಡಾರಿ ಅವರನ್ನು ಸಹ ಜಾರಿ ನಿರ್ದೇಶನಾಲಯ ಆರೋಪಿಗಳನ್ನಾಗಿ ಮಾಡಿತ್ತು.
ನ್ಯಾಯಾಲಯದ ಈ ಆದೇಶವು ಗಾಂಧಿ ಕುಟುಂಬಕ್ಕೆ ತಾತ್ಕಾಲಿಕ ರಿಲೀಫ್ ನೀಡಿದರೂ, ತನಿಖೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಪ್ರಕರಣವು ಮುಂದಿನ ಬೆಳವಣಿಗೆ ರಾಜಕೀಯ ಹಾಗೂ ಕಾನೂನು ವಲಯದ ಗಮನ ಹರಿದಿದೆ.