ರಾಜಕೀಯದಲ್ಲಿ ಕೆಲವೊಮ್ಮೆ ದೊಡ್ಡ ಘೋಷಣೆಗಳೇ ಬೇಕಾಗಿಲ್ಲ. ಒಂದು ಚಿಕ್ಕ ನೇಮಕಾತಿಯೇ ಸಾಕು. ನಿತಿನ್ ನಬಿನ್ ಎಂಬ ಹೆಸರು ಅಂಥದ್ದೇ. ಹಾಗೆ ನೋಡಿದ್ರೆ ನಿತಿನ್ ನಬಿನ್ ಅಂದ್ರೆ ಯಾರಿಗೆ ಗೊತ್ತಿತ್ತು? ಯಾರೋ ದೊಡ್ಡ ದೊಡ್ಡ ತಲೆಗಳನ್ನು ತರದೆ ಎಲ್ಲೋ ತನ್ನ ಪಾಡಿಗೆ ಇದ್ದ ಹುಡುಗನನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಮುಂದೆ ತಂದಿದೆ. ಕೇಳುವುದಕ್ಕೆ ಇದು ಬಿಜೆಪಿಯ ಆಂತರಿಕ ವಿಚಾರದಂತೆ ಕಾಣಬಹುದು. ಆದರೆ ನಿಜವಾಗಿ ಇದು ಕಾಂಗ್ರೆಸ್ ಮನೆ ಬಾಗಿಲಿಗೆ ಅಂಟಿಸಿದ ಚೀಟಿ. “ಇನ್ನೂ ಎಷ್ಟು ದಿನ ಹೀಗೆ?” ಎಂದು ಕೇಳುವ ಚೀಟಿ.
ಬಿಜೆಪಿ ಏನು ಮಾಡುತ್ತಿದೆ ಅನ್ನೋದಕ್ಕಿಂತ, ಕಾಂಗ್ರೆಸ್ ಏನು ಮಾಡುತ್ತಿಲ್ಲ ಅನ್ನೋದು ಇಲ್ಲಿ ಮುಖ್ಯ. ಬಿಜೆಪಿ ಯುವ, ಸಂಘಟನೆ ಗೊತ್ತಿರುವ, ಕಾದಾಡುವ ಶಕ್ತಿಯುಳ್ಳ ನಾಯಕರನ್ನು ಒಂದೊಂದಾಗಿ ಮುಂದೆ ತರುತ್ತಿದೆ. ಇತ್ತ ಕಾಂಗ್ರೆಸ್ ಮಾತ್ರ ಇನ್ನೂ ಹಳೆಯ ಫೋಟೋ ಆಲ್ಬಮ್ ತೆರೆದು, “ಇವ್ರು ಇದ್ದಾರೆ… ಅವ್ರು ಇದ್ದಾರೆ” ಅಂತ ನೆನಪಿಸಿಕೊಳ್ಳುತ್ತಾ ಕುಳಿತಿದೆ. ಮೂರು ತಲೆಮಾರು, ಒಂದು ಗೊಂದಲ.. ಕಾಂಗ್ರೆಸ್ ಅಂದರೆ ಈಗ ಒಂದು ಪಕ್ಷ ಅಲ್ಲ. ಅದು ಒಂದು ಕುಟುಂಬದ ಆಲ್ಬಮ್.

ಒಂದು ಪುಟದಲ್ಲಿ ಸೋನಿಯಾ ಗಾಂಧಿ — ಮೌನದ ರಾಜಕೀಯ. , ಇನ್ನೊಂದು ಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆ — ಗೌರವದ ಅಧ್ಯಕ್ಷ. ಮತ್ತೊಂದು ಪುಟದಲ್ಲಿ ರಾಹುಲ್ ಗಾಂಧಿ — ನಿರಂತರ ಹುಡುಕಾಟದಲ್ಲಿರುವ ನಾಯಕ. ಇವರ ಮಧ್ಯೆ ಪಕ್ಷ ಮಾತ್ರ ಕಳೆದುಹೋಗಿದೆ.
ಬಿಜೆಪಿ ನಿತಿನ್ ನಬಿನ್ ಅನ್ನೋ ಹುಡುಗನನ್ನು ಮುಂದೆ ತರುತ್ತದೆ. ದೊಡ್ಡ ಹೆಸರು ಅಲ್ಲ. ಭಾರೀ ಭಾಷಣವೂ ಅಲ್ಲ. ಆದರೆ ಸಂಘಟನೆ ಗೊತ್ತಿರುವ, ಕೆಲಸ ಮಾಡುವ ವ್ಯಕ್ತಿ. ಕಾಂಗ್ರೆಸ್ ಇದನ್ನೆಲ್ಲ ನೋಡಿ ಏನು ಮಾಡುತ್ತಿದೆ ಅಂದ್ರೆ — ಇನ್ನೂ ಮನೆಯೊಳಗೆ ಕೂತು “ನಮ್ಮ ಇತಿಹಾಸ ಬಹಳ ದೊಡ್ಡದು” ಅಂತ ಕನ್ನಡಿ ಮುಂದೆ ನಿಂತುಕೊಂಡಿದೆ. ಇತಿಹಾಸದಿಂದ ಚುನಾವಣೆಗೆ ಗೆಲ್ಲಲು ಆಗಲ್ಲ ಅನ್ನೋ ಸತ್ಯವನ್ನು ಕಾಂಗ್ರೆಸ್ ಇನ್ನೂ ಒಪ್ಪಿಕೊಂಡಿಲ್ಲ.
ಸೋನಿಯಾ: ಮೌನದ ಶಕ್ತಿ, ಆದರೆ ದೂರದ ನಿಯಂತ್ರಣ
ಸೋನಿಯಾ ಗಾಂಧಿ ಇಂದಿಗೂ ಕಾಂಗ್ರೆಸ್‌ನ ಅಸಲಿ ಪವರ್ ಸೆಂಟರ್. ಮಾತನಾಡಲ್ಲ. ಆದರೆ ನಿರ್ಧಾರಗಳು ಅಲ್ಲೇ ಹುಟ್ಟುತ್ತವೆ. ಸಮಸ್ಯೆ ಏನಂದ್ರೆ — ಇಂದಿನ ರಾಜಕೀಯದಲ್ಲಿ ಮೌನಕ್ಕೆ ಮೌಲ್ಯ ಕಡಿಮೆ. ಜನರಿಗೆ ಈಗ ಬೇಕಾಗಿರುವುದು ಸ್ಪಷ್ಟ ಧ್ವನಿ. ಸ್ಪಷ್ಟ ದಿಕ್ಕು.
ಅದು ಸೋನಿಯಾ ರಾಜಕೀಯ ಶೈಲಿಯಲ್ಲ. ಅವರ ಮೌನ ಪಕ್ಷಕ್ಕೆ ಗೌರವ ಕೊಡಬಹುದು. ಆದರೆ ಗೆಲುವು ಕೊಡಲ್ಲ.
ಖರ್ಗೆ: ಅಧ್ಯಕ್ಷ, ಆದರೆ ಚಾಲಕ ಅಲ್ಲ
ಮಲ್ಲಿಕಾರ್ಜುನ ಖರ್ಗೆ — ಪ್ರಾಮಾಣಿಕ. ಅನುಭವಿ. ಹೋರಾಟಗಾರ ನಿಜ. ಆದರೆ ಅವರು ಕಾಂಗ್ರೆಸ್‌ನ ಚಾಲಕನಲ್ಲ. ಅವರು ಸೀಟಿನ ಮೇಲೆ ಕೂತಿದ್ದಾರೆ ಅಷ್ಟೇ. ಸ್ಟೀರಿಂಗ್, ಬ್ರೇಕ್ ಇನ್ನೂ ಬೇರೆ ಕೈಯಲ್ಲಿ ಒದೆ. ಆಕ್ಸಿಲರೇಟರ್ ಇನ್ನೂ ನಿರ್ಧಾರವೇ ಇಲ್ಲದ ಸ್ಥಿತಿಯಲ್ಲಿ ಇದೆ.
ಅಧ್ಯಕ್ಷನಾಗಿದ್ದರೂ, ಖರ್ಗೆ ಕಾಂಗ್ರೆಸ್‌ಗೆ ದಿಕ್ಕು ಕೊಡುತ್ತಾರೆ ಅನ್ನೋ ಭಾವನೆ ಕಾರ್ಯಕರ್ತರಲ್ಲಿಯೂ ಇಲ್ಲ. ಇದು ಪಕ್ಷಕ್ಕೆ ಅತಿದೊಡ್ಡ ಅಪಾಯ.
ರಾಹುಲ್: ಹುಡುಕಾಟ ಮುಗಿಯದ ನಾಯಕ. ರಾಹುಲ್ ಗಾಂಧಿ ಸಮಸ್ಯೆ ಏನು ಗೊತ್ತಾ? ಅವರಿಗೆ ಇನ್ನೂ “ನಾನು ಯಾರು?” ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಒಂದ್ಸಾರಿ ಕ್ರಾಂತಿಕಾರಿ. ಒಂದ್ಸಾರಿ ಸಂವೇದನಾಶೀಲ. ಒಂದ್ಸಾರಿ ವ್ಯವಸ್ಥೆ ವಿರುದ್ಧ. ಒಂದ್ಸಾರಿ ವ್ಯವಸ್ಥೆಯೊಳಗೆ ಇದ್ದಾರೆ ಅಂತ ಅನಿಸ್ತಾ ಇದೆ.
ಜನ ಗೊಂದಲಕ್ಕೊಳಗಾಗ್ತಾರೆ. ಪಕ್ಷ ಗೊಂದಲಕ್ಕೊಳಗಾಗ್ತದೆ. ರಾಜಕೀಯದಲ್ಲಿ ನಾಯಕನು ಹುಡುಕಾಟದಲ್ಲಿದ್ದರೆ, ಪಕ್ಷ ಅನಾಥವಾಗುತ್ತದೆ. ಆದರೆ ಬಿಜೆಪಿ, ಬಿಜೆಪಿ ನಾಯಕತ್ವವನ್ನು ಸೃಷ್ಟಿ ಮಾಡುತ್ತಿದೆ. ಕಾಂಗ್ರೆಸ್ ನಾಯಕತ್ವವನ್ನು ಸಹಿಸಿಕೊಳ್ಳುತ್ತಿದೆ. ಇಲ್ಲೇ ಇರೋದು ನೋಡಿ ವ್ಯತ್ಯಾಸ.
ನಿತಿನ್ ನಬಿನ್ ಬಿಜೆಪಿಗೆ ದೊಡ್ಡ ಗೆಲುವಲ್ಲ. ಆದರೆ ಕಾಂಗ್ರೆಸ್‌ಗೆ ಒಂದು ದೊಡ್ಡ ಪಾಠ. ತನ್ನ ಸೇನಾಧಿಪತ್ಯವನ್ನು ಒಬ್ಬ ಸಮರ್ಥನಿಗೆ ಕೊಡಬೇಕು ಎನ್ನುವುದೇ ಆ ಪಾಠ. ಏಕೆಂದರೆ ಎದುರಾಳಿಗಳು ಯುವಕರನ್ನು, ಸಂಘಟಕರನ್ನು, ಕೆಲಸಗಾರರನ್ನು ತರುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಇನ್ನೂ ವಂಶಾವಳಿಯ ಲೆಕ್ಕ ಹಾಕುತ್ತಿದ್ದಾರೆ.
ರಾಜಕೀಯದಲ್ಲಿ ಜನ ಕೇಳೋದು ಒಂದೇ: “ನೀನು ನಾಳೆ ಏನು ಮಾಡ್ತೀಯ?” ಅಂತ. ಆದರೆ ಕಾಂಗ್ರೆಸ್ ಇನ್ನೂ ಉತ್ತರ ಕೊಡ್ತಾ ಇಲ್ಲ. ಆದರೆ ಬಿಜೆಪಿ ಈಗಲೇ ಕೆಲಸ ಶುರು ಮಾಡಿದೆ. ಇದು ಬಿಜೆಪಿಯ ಕಥೆ ಅಲ್ಲ. ಇದು ಕಾಂಗ್ರೆಸ್‌ನ ದುರಂತ. ಮೂರು ನಾಯಕರು. ಮೂರು ತಲೆಮಾರು. ಆದರೆ ಪಕ್ಷ ಮಾತ್ರ ಒಂದೇ ಜಾಗದಲ್ಲಿ ನಿಂತಿದೆ. ಹೀಗೇ ನಿಂತಿದ್ದರೆ, ನಾಳೆ ಇತಿಹಾಸ ಪುಸ್ತಕದಲ್ಲಿ ಕಾಂಗ್ರೆಸ್‌ಗೆ ಒಂದೇ ಸಾಲು ಸಾಕು: “ಇತ್ತು. ಆದರೆ ಕಾಲಕ್ಕೆ ತಕ್ಕಂತೆ ಬದಲಾಗಲಿಲ್ಲ.”
-Girish