ರಾಯಚೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಯುವಕನೋರ್ವನನ್ನು ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ನಡೆದಿದೆ.

ಬುಳ್ಳಾಪುರ ಗ್ರಾಮದ ನಿವಾಸಿ ಪ್ರಾಣೇಶ್ (23) ಕೊಲೆಯಾದ ಯುವಕ.
ದಿನ್ನಿ ಗ್ರಾಮದ ಪ್ರಸಾದ್, ಮಲ್ಲೇಶ್, ಮಲ್ಲಿಕಾರ್ಜುನ್, ಅಮರೇಶ್ ಎಂಬುವವರಿಂದ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.


ಬುಳ್ಳಾಪುರದಲ್ಲಿ ಜಾಗದ ವಿಷಯವಾಗಿ ನ್ಯಾಯ ಪಂಚಾಯಿತಿ ನಡೆಯುತ್ತಿದ್ದ ವೇಳೆ ತಾಯಿ ಎದುರಲ್ಲೇ ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಪ್ರಾಣೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.