ಸೈಂಟ್ ಅಲೋಶಿಯಸ್ ವಿವಿಯಿಂದ ಉದ್ಯೋಗಾಧಾರಿತ ಶಿಕ್ಷಣಕ್ಕೆ ಹೊಸ ವೇಗ: ಕಲಿಯುತ್ತಲೇ ಗಳಿಸುವ ‘IEP’ ಪದವಿ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು: ಇಂದಿನ ವೇಗದ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿ ಪ್ರಮಾಣಪತ್ರ ಹಿಡಿದು ಕೆಲಸ ಹುಡುಕುವುದು ಸವಾಲಿನ ಕೆಲಸ. ಪದವೀಧರರಿಗೆ ಪ್ರಾಯೋಗಿಕ ಅನುಭವದ ಕೊರತೆ ಇರುವುದನ್ನು ಗಮನಿಸಿರುವ ಮಂಗಳೂರಿನ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ), ಇದೀಗ ಸಿಯೆರಾ ಲರ್ನಿಂಗ್ ಅಕಾಡೆಮಿ ಸಹಯೋಗದೊಂದಿಗೆ ದೇಶದಲ್ಲೇ ಮೊದಲ ಎನ್ನಬಹುದಾದ ‘ಇಂಡಸ್ಟ್ರಿ ಎಂಬೆಡೆಡ್ ಪ್ರೋಗ್ರಾಂ’ (IEP) ಮಾದರಿಯ ಪದವಿ ಕೋರ್ಸ್‌ಗಳನ್ನು ಆರಂಭಿಸಿದೆ ಎಂದು ದೀಪಿತ್‌ ಕುಂದರ್‌ ಮಾಹಿತಿ ನೀಡಿದರು.


ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾನ್ಯವಾಗಿ ಪದವಿ ಶಿಕ್ಷಣ ಮುಗಿದ ನಂತರ ಅಥವಾ ಅಂತಿಮ ವರ್ಷದಲ್ಲಿ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ಗಾಗಿ ಹುಡುಕಾಡುತ್ತಾರೆ. ಆದರೆ, ಸೈಂಟ್ ಅಲೋಶಿಯಸ್ ಪರಿಚಯಿಸುತ್ತಿರುವ ಈ ನೂತನ ವ್ಯವಸ್ಥೆಯಲ್ಲಿ ಮೊದಲ ವರ್ಷದ ಮೊದಲ ಸೆಮಿಸ್ಟರ್‌ನಿಂದಲೇ ವಿದ್ಯಾರ್ಥಿಗಳಿಗೆ ಉದ್ಯಮಗಳ ನೇರ ಸಂಪರ್ಕ ಸಿಗಲಿದೆ. ಇದು ಕೇವಲ ಸೈದ್ಧಾಂತಿಕ ಪಾಠಕ್ಕೆ ಸೀಮಿತವಾಗದೆ, ‘ಮಾಡುತ್ತಾ ಕಲಿಯುವ’ (Learn by Doing) ಪ್ರಾಯೋಗಿಕ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದರು.

ಸದ್ಯಕ್ಕೆ ಈ ಮಾದರಿಯ ಅಡಿಯಲ್ಲಿ ಎರಡು ಮುಖ್ಯ ಪದವಿಗಳನ್ನು ಪರಿಚಯಿಸಲಾಗಿದೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಆಸಕ್ತಿಯಿರುವವರಿಗಾಗಿ ‘BCA in AI-Augmented Software Systems’ ಮತ್ತು ಮಾಧ್ಯಮ ಹಾಗೂ ಸೃಜನಶೀಲ ಕ್ಷೇತ್ರದಲ್ಲಿ ಮಿಂಚ ಬಯಸುವವರಿಗಾಗಿ ‘BSc in Media and Creative Technologies’ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಎರಡೂ ಕೋರ್ಸ್‌ಗಳು ಉದ್ಯಮದ ಇಂದಿನ ಬೇಡಿಕೆಗೆ ಅನುಗುಣವಾಗಿ ರೂಪುಗೊಂಡಿವೆ. ಈ ಕಾರ್ಯಕ್ರಮದ ಅತ್ಯಂತ ಆಕರ್ಷಕ ಅಂಶವೆಂದರೆ ‘ಪೇಯ್ಡ್ ಇಂಟರ್ನ್‌ಶಿಪ್’. ವಿದ್ಯಾರ್ಥಿಗಳು ಮೊದಲ ಸೆಮಿಸ್ಟರ್‌ನಿಂದಲೇ ಲೈವ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವುದರ ಜೊತೆಗೆ ಸ್ಟೈಪೆಂಡ್ (ಗೌರವಧನ) ಪಡೆಯಲಿದ್ದಾರೆ. ಇನ್ನು ಮೂರನೇ ವರ್ಷವಂತೂ ಸಂಪೂರ್ಣವಾಗಿ ಉದ್ಯಮಗಳಲ್ಲಿ ಪೂರ್ಣಕಾಲಿಕ ಕೆಲಸ ಮಾಡಬೇಕಿರುವುದು ಕಡ್ಡಾಯವಾಗಿದೆ. ಇದರಿಂದ ಪದವಿ ಮುಗಿಯುವ ಹೊತ್ತಿಗೆ ವಿದ್ಯಾರ್ಥಿಯ ಕೈಯಲ್ಲಿ ಒಂದು ವರ್ಷದ ನೈಜ ಉದ್ಯೋಗ ಅನುಭವ ಇರುತ್ತದೆ ಎಂದು ದೀಪಿತ್‌ ಕುಂದರ್‌ ನುಡಿದರು.

ಅಂತರ ನೀಗಿಸುವ ಪ್ರಯತ್ನ
ಸುದ್ದಿಗೋಷ್ಠಿಯಲ್ಲಿ ಸಿಯೆರಾ ಲರ್ನಿಂಗ್ ಅಕಾಡೆಮಿಯ ಉದ್ದೇಶವನ್ನು ವಿವರಿಸಿದ ವ್ಯವಸ್ಥಾಪಕ ನಿರ್ದೇಶಕ ವಿನೋಲ್ ಡಿಕೋಸ್ಟಾ, “ವಿಶ್ವವಿದ್ಯಾಲಯದ ಕಲಿಕೆ ಮತ್ತು ಕಂಪೆನಿಗಳ ನಿರೀಕ್ಷೆಗಳ ನಡುವೆ ದೊಡ್ಡ ಕಂದಕವಿದೆ. ಅದನ್ನು ತುಂಬುವುದೇ ನಮ್ಮ ಉದ್ದೇಶ. ಮಂಗಳೂರಿನ ಪ್ರತಿಭಾವಂತ ವಿದ್ಯಾರ್ಥಿಗಳು ಕೆಲಸ ಅರಸಿ ಹೊರಗೆ ಹೋಗುವ ಬದಲು, ಇಲ್ಲಿಯೇ ಕೌಶಲ್ಯ ಪಡೆದು ಜಾಗತಿಕ ಮಟ್ಟದ ಉದ್ಯೋಗಗಳನ್ನು ಪಡೆಯಲಿ ಎಂಬುದು ನಮ್ಮ ಆಶಯ,” ಎಂದು ತಿಳಿಸಿದರು.

ಪ್ರವೇಶಾತಿ ಮತ್ತು ಸೌಲಭ್ಯ
ಈ ಹೊಸ ಪದವಿ ಕಾರ್ಯಕ್ರಮಗಳು 2026ರ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿವೆ. ಅಷ್ಟೇ ಅಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಉದ್ಯೋಗ ಪಡೆದ ನಂತರ ಫೀಸ್ ಪಾವತಿಸುವ’ (Pay after Placement) ವಿಶೇಷ ಸ್ಕಾಲರ್‌ಶಿಪ್ ಸೌಲಭ್ಯವನ್ನೂ ನೀಡಲಾಗುತ್ತಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ವೆಬ್‌ಸೈಟ್ ಅಥವಾ ಸಿಯೆರಾ ಲರ್ನಿಂಗ್ ಅಕಾಡೆಮಿಯ ಪೋರ್ಟಲ್ ಸಂಪರ್ಕಿಸಬಹುದು ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾರ್ಕೆಟಿಂಗ್‌ ಮೈಾನೇಜರ್‌ ಲವಿಟಾ, ಪಿಆರ್‌ಓ ಫಾ| ಮೆಲ್ವಿನ್‌, ಪಿಆರ್‌ಓ ಚಂದ್ರಕಲಾ, ಟೆಕ್ನಿಕಲ್‌ ಅಡ್ವೈಸರ್‌ ಮನು,  ಅಸಿಸ್ಟೆಂಟ್‌ ಪ್ರೊಫೆಸರ್‌ ರಿಷಲ್‌ ಉಪಸ್ಥಿತರಿದ್ದರು.

error: Content is protected !!