ಮಂಗಳೂರಿನಲ್ಲಿ ಮಾರ್ಚ್ 20ಕ್ಕೆ ಅದ್ದೂರಿ ʻವಿದ್ಯಾರ್ಥಿ ತುಳು ಸಮ್ಮೇಳನ’: ವಿದ್ಯಾರ್ಥಿಗಳೇ ಉದ್ಘಾಟರು, ವಿದ್ಯಾರ್ಥಿನಿಯೇ ಸಮ್ಮೇಳನಾಧ್ಯಕ್ಷೆ!

ಮಂಗಳೂರು: ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ವಿಶಿಷ್ಟ ಪ್ರಯತ್ನವಾಗಿ ತುಳು ಪರಿಷತ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಇದೇ ಬರುವ ಮಾರ್ಚ್ 20ರಂದು ನಗರದ ತುಳು ಭವನದಲ್ಲಿ ‘ಮೂರನೆಯ ವಿದ್ಯಾರ್ಥಿ ತುಳು ಸಮ್ಮೇಳನ’ವನ್ನು ಆಯೋಜಿಸಿವೆ. ಈ ಸಮ್ಮೇಳನವು ಸಂಪೂರ್ಣವಾಗಿ ವಿದ್ಯಾರ್ಥಿಗಳನ್ನೇ ಕೇಂದ್ರವಾಗಿರಿಸಿಕೊಂಡಿದ್ದು, ಅವರೇ ಕಾರ್ಯಕ್ರಮದ ಮುಂಚೂಣಿ ಸಾರಥ್ಯವನ್ನು ವಹಿಸಲಿದ್ದಾರೆ ಎಂದು ತುಳು ಪರಿಷತ್‌ ಅಧ್ಯಕ್ಷ ಶುಭೋದಯ್‌ ಆಳ್ವ ಮಾಹಿತಿನೀಡಿದರು.

 

ಆಯೋಜಕರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು,  ಹಿಂದಿನ ಎರಡು ಸಮ್ಮೇಳನಗಳ ಯಶಸ್ವಿ ಸಂಪ್ರದಾಯವನ್ನು ಮುಂದುವರಿಸುತ್ತಾ, ಈ ಬಾರಿಯೂ ಪ್ರತಿಭಾವಂತ ವಿದ್ಯಾರ್ಥಿಗಳೇ ಉದ್ಘಾಟಕರಾಗಿ ಮತ್ತು ಅಧ್ಯಕ್ಷರಾಗಿ ವೇದಿಕೆ ಅಲಂಕರಿಸಲಿದ್ದಾರೆ. ದೇರಳಕಟ್ಟೆಯ ನಿಟ್ಟೆ ವಿದ್ಯಾಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿ ಶ್ರೀ ಪ್ರೀತಮ್ ನಾಯಕ್ ಸಮ್ಮೇಳನವನ್ನು ಉದ್ಘಾಟಿಸಿದರೆ, ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜಿನ ಪದವಿ ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಇತಿಹಾಸ ಬರೆಯಲಿದ್ದಾರೆ ಎಂದರು.

ಸಮ್ಮೇಳನದ ಬೌದ್ಧಿಕ ಮೆರುಗನ್ನು ಹೆಚ್ಚಿಸಲು ಮಾಜಿ ಮುಖ್ಯಮಂತ್ರಿಗಳು ಹಾಗೂ ಖ್ಯಾತ ಸಾಹಿತಿಗಳಾದ ಡಾ. ಎಂ. ವೀರಪ್ಪ ಮೊಯಿಲಿ ಅವರು ಆಗಮಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಧಾನಸಭಾ ಸಭಾಪತಿಗಳಾದ ಶ್ರೀ ಯು.ಟಿ. ಖಾದರ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದಾರೆ. ಉದ್ಘಾಟನೆಯ ಬಳಿಕ ನಡೆಯುವ ಮೊದಲ ಗೋಷ್ಠಿಯಲ್ಲಿ ನಿಡಸೋಸಿ ಮಠದ ಮುರಾಧಿಪತಿಗಳು ಹಾಗೂ ಪರಿಸರ ತಜ್ಞರಾದ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳು ಮಾತನಾಡಲಿದ್ದಾರೆ. ಎರಡನೆಯ ಗೋಷ್ಠಿಯಲ್ಲಿ ಆರು ಮಂದಿ ವಿದ್ಯಾರ್ಥಿಗಳು ತುಳುನಾಡಿನ ಸೌಹಾರ್ದ ಪರಂಪರೆಯ ಬಗ್ಗೆ ಸಮ್ಮೇಳನಾಧ್ಯಕ್ಷರೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ.

ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಿಗಾಗಿ ಆಕರ್ಷಕ ‘ತುಳು ತುತ್ತೈತ’ (ತುಳುನಾಡಿನ ಸಾಂಪ್ರದಾಯಿಕ ಉಡುಗೆ) ಸ್ಪರ್ಧೆ ನಡೆಯಲಿದೆ. ಸಂಜೆ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಕರಾವಳಿಯ ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಲಿದ್ದಾರೆ. ಮಾರ್ಚ್ 10ರಂದು ನಡೆದ ‘ಕಲಾಸಿರಿ’ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಗುವುದು ಎಂದು ಶುಭೋದಯ ಅಳ್ವಾ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ತುಳು ಪರಿಷತ್ ಗೌರವಾಧ್ಯಕ್ಷರಾದ ಪ್ರಭಾಕರ ನೀರ್‌ಮಾರ್ಗ, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮಣ್ಣ, ಕೋಶಾಧಿಕಾರಿ ಸುಮತಿ ಹೆಗ್ಡೆ, ಸಮ್ಮೇಳನ ಸಂಚಾಲಕಿ ಅಮಿತಾ ಅಶ್ವಿನ್, ಶಿಕ್ಷಕಿ ಹಾಗೂ ಸಮ್ಮೇಳನ ನಿರೂಪಕಿ ಸುಧಾ ನಾಗೇಶ್ ಮತ್ತು ಸ್ಪರ್ಧಾ ಸಂಚಾಲಕ ದುರ್ಗಾಪ್ರಸಾದ್ ಉಪಸ್ಥಿತರಿದ್ದು, ಸಮ್ಮೇಳನದ ಕುರಿತು ಸಮಗ್ರ ಮಾಹಿತಿ ನೀಡಿದರು.

error: Content is protected !!