ಮಂಗಳೂರು: ಮಂಗಳೂರು ನಗರಕ್ಕೆ ನಿಷೇಧಿತ ಮಾದಕದ್ರವ್ಯ ಎಂ.ಡಿ.ಎಂ.ಎ ಪೂರೈಕೆ ಮಾಡುತ್ತಿದ್ದ ಐವರು ಆರೋಪಿಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಡಿಸೆಂಬರ್ 6ರಂದು 12 ರಿಂದ 14 ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗು ದಂಡ ವಿಧಿಸಿದೆ. ದೋಷಿಗಳ ಪೈಕಿ ಒಬ್ಬರು ಸುಡಾನ್ ದೇಶದ ಪ್ರಜೆಯೂ ಆಗಿದ್ದಾರೆ.

ಈ ಪ್ರಕರಣವು 14-06-2022ರಂದು ಮಂಗಳೂರು ಸಿಸಿಬಿ ಘಟಕದಿಂದ ಪತ್ತೆಯಾಗಿದ್ದು, ದಾಳಿಯ ಸಂದರ್ಭದಲ್ಲಿ ಎಂ.ಡಿ.ಎಂ.ಎ ವಶಪಡೆದ ಜೊತೆ ಆರೋಪಿಗಳ ಬಂಧನ ನಡೆದಿತ್ತು. ಈ ಕುರಿತು ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. 54/2022ರಂತೆ ಪ್ರಕರಣ ದಾಖಲಾಗಿತ್ತು.
ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ ಸರಕಾರಿ ಅಭಿಯೋಜಕಿ ಶ್ರೀಮತಿ ಜುಡಿತ್ ಓಲ್ಗಾ ಮಾರ್ಗರೇತ್ ಕ್ರಾಸ್ತಾ ಅವರು ನಿಖರ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಸ್ಪಷ್ಟವಾಗಿ ಮಂಡಿಸಿ, ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಕಮೀಷನರ್‌ನಿಂದ ವಿಶೇಷ ಸನ್ಮಾನ
ಈ ಪ್ರಕರಣವನ್ನು ಯಶಸ್ವಿಯಾಗಿ ಮುನ್ನಡೆಸಿದಕ್ಕಾಗಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ವಿಶೇಷವಾಗಿ ಜುಡಿತ್ ಓಲ್ಗಾ ಮಾರ್ಗರೇತ್ ಕ್ರಾಸ್ತಾ ಅವರನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಿಥುನ್, ಐಪಿಎಸ್, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ), ಹಾಗೂ ಶ್ರೀ ರವೀಶ್ ನಾಯಕ್, ಎಸಿಪಿ (ಸೆನ್ ಪೊಲೀಸ್ ಠಾಣೆ) ಉಪಸ್ಥಿತರಿದ್ದರು.
