ಸಸಿಹಿತ್ಲು: ಗಾಯಗೊಂಡ ಕಡಲಾಮೆಯ ರಕ್ಷಣೆ; ಕುಂದಾಪುರದಲ್ಲಿ ಚಿಕಿತ್ಸೆ

ಮೂಲ್ಕಿ: ತಾಲೂಕಿನ ಸಸಿಹಿತ್ಲು ಭಗವತೀ ದೇವಸ್ಥಾನದ ಸಮೀಪದ ಕಡಲತೀರಕ್ಕೆ ಸುಮಾರು 45 ಕೆಜಿ ತೂಕದ ಬೃಹತ್ ಕಡಲಾಮೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ತಡಕ್ಕೆ ಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರ ಸಹಕಾರದೊಂದಿಗೆ ಅದನ್ನು ರಕ್ಷಿಸಲಾಗಿದೆ.

ಮನೋಜ್ ಸೋನಾ RFO COASTAL AND MARINE DIVISION

ಸಮುದ್ರದ ಅಲೆಗಳ ಅಬ್ಬರಕ್ಕೆ ದಡಕ್ಕೆ ಬಂದಿದ್ದ ಈ ಕಡಲಾಮೆಯ ‘ಪ್ಲಿಪ್ಪರ್’ (ಈಜು ರೆಕ್ಕೆ) ತುಂಡಾಗಿದ್ದು, ತೀವ್ರವಾಗಿ ಗಾಯಗೊಂಡಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಕರಾವಳಿ ಮತ್ತು ಮೆರೈನ್ ವಿಭಾಗದ ಅಧಿಕಾರಿಗಳು ಆಮೆಯನ್ನು ವಶಕ್ಕೆ ಪಡೆದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇದನ್ನು ಕುಂದಾಪುರದ ಕೋಡಿಬೆಂಗ್ರೆ ಮೆರೈನ್ ಕೇರ್ ರೆಸ್ಕ್ಯೂ ಸೆಂಟರ್‌ಗೆ ರವಾನಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕರಾವಳಿ ಮತ್ತು ಮೆರೈನ್ ವಿಭಾಗದ ಆರ್.ಎಫ್.ಒ (RFO) ಮನೋಜ್ ಸೋನಾ ಅವರು, “ಗಾಯಗೊಂಡ ಕಡಲಾಮೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದೇವೆ. ಅದರ ಪ್ಲಿಪ್ಪರ್ ರೈಡ್(ಈಜುರೆಕ್ಕೆಗೆ ಗಾಯ) ಆಗಿದ್ದು, ಇದು ನೀರಿನ ಒಳಗಡೆಯೇ ಆಗಿರುವ ಗಾಯದಂತೆ ಕಾಣುತ್ತಿದೆ. ವೈದ್ಯಕೀಯ ವರದಿ ಬಂದ ನಂತರವಷ್ಟೇ ಗಾಯಕ್ಕೆ ನಿಖರ ಕಾರಣ ತಿಳಿಯಲಿದೆ. ಚಿಕಿತ್ಸೆ ಮುಗಿದು ಆಮೆ ಚೇತರಿಸಿಕೊಂಡ ನಂತರ ಅದನ್ನು ಮರಳಿ ಸಮುದ್ರಕ್ಕೆ ಬಿಡಲಾಗುವುದು,” ಎಂದು ತಿಳಿಸಿದ್ದಾರೆ.

ನಮ್ಮ ಕರಾವಳಿ ಭಾಗದಲ್ಲಿ ಕಡಲಾಮೆಗಳ ಸಂತಾನೋತ್ಪತ್ತಿ (Nesting) ನಿರಂತರವಾಗಿ ನಡೆಯುತ್ತಿದ್ದು, ಇಲಾಖೆಯು ಅವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಪ್ರಸ್ತುತ ಕಡಲಾಮೆಯು ಕುಂದಾಪುರದ ಪರಿಣಿತ ವೈದ್ಯರ ನಿಗಾದಲ್ಲಿದೆ.

error: Content is protected !!