ನವದೆಹಲಿ/ಇಸ್ಲಾಮಾಬಾದ್: ಅದು 2025 ಮೇ 10ರ ಆ ಕಾಲರಾತ್ರಿ… ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಘರ್ಜಿಸುತ್ತಾ ಗಡಿ ದಾಟಿದಾಗ ಪಾಕಿಸ್ತಾನಕ್ಕೆ ತಿಳಿಯಲೇ ಇಲ್ಲ ತನ್ನ ಗರ್ವ ಅದೆಷ್ಟು ಹೀನಾಯವಾಗಿ ಮಣ್ಣಾಗಲಿದೆ ಎಂದು! ಭಾರತದ ʻಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಅಬ್ಬರಕ್ಕೆ ನಲುಗಿದ್ದ ಪಾಕಿಸ್ತಾನದ ಚಕ್ವಾಲ್ ಬಳಿಯ ಮುರಿದ್ ವಾಯುನೆಲೆ ಈಗ ಅಕ್ಷರಶಃ ಮುರಿದು ಹೋಗಿದ್ದು, ಇತಿಹಾಸದ ಪುಟ ಸೇರಿದೆ. ಭಾರತೀಯ ಕ್ಷಿಪಣಿಗಳ ಹೊಡೆತ ಎಂಥದ್ದು ಎಂದರೆ, ಹತ್ತು ತಿಂಗಳ ಕಾಲ ತೇಪೆ ಹಚ್ಚಲು ಹರಸಾಹಸ ಪಟ್ಟ ಪಾಪಿ ಪಾಕಿಸ್ತಾನಕ್ಕೆ ಈಗ ಬೇರೆ ದಾರಿಯಿಲ್ಲದೆ ತನ್ನದೇ ವಾಯುನೆಲೆಯನ್ನು ತಾನೇ ಬುಲ್ಡೋಜರ್ ಹಚ್ಚಿ ನೆಲಸಮ ಮಾಡುವ ದುಸ್ಥಿತಿ ಬಂದಿದೆ!

ಭಾರತದ ದಾಳಿ ನಡೆದ ದಿನವೇ ಮುರಿದ್ ವಾಯುನೆಲೆಯ ಕಮಾಂಡ್ ಸೆಂಟರ್ ಛಿದ್ರವಾಗಿತ್ತು. ಜಗತ್ತಿನ ಎದುರು ಮುಖಭಂಗ ತಪ್ಪಿಸಿಕೊಳ್ಳಲು ಪಾಕಿಸ್ತಾನ ಸೇನೆ ಆ ಭಗ್ನಾವಶೇಷಗಳನ್ನು ದೊಡ್ಡ ಟಾರ್ಪೌಲಿನ್ ಹಾಕಿ ಮುಚ್ಚಿಟ್ಟು, “ನಮಗೇನೂ ಆಗಿಲ್ಲ” ಎಂದು ಬೀಗುತ್ತಿತ್ತು. ಆದರೆ, ಸ್ಯಾಟಲೈಟ್ ಚಿತ್ರಗಳು ಈಗ ಪಾಕಿಸ್ತಾನದ ಬೆತ್ತಲೆ ಸತ್ಯವನ್ನು ಜಗತ್ತಿಗೆ ಸಾರುತ್ತಿವೆ. ಭಾರತದ ಕ್ಷಿಪಣಿಗಳು ಕಟ್ಟಡದ ಆಳಕ್ಕೆ ಇಳಿದು ಅಡಿಪಾಯವನ್ನೇ ಗುಜರಿ ಮಾಡಿದ್ದವು. ಅದೆಷ್ಟು ದುರಸ್ತಿ ಮಾಡಿದರೂ ಆ ಕಟ್ಟಡ ನಿಲ್ಲುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಸೋಲೊಪ್ಪಿಕೊಂಡ ಪಾಕ್ ಸೇನೆ, ಅಸುರಕ್ಷಿತವಾಗಿದ್ದ ಆ ಇಡೀ ಕಟ್ಟಡವನ್ನು ಕೆಡವಿ ಹಾಕಿ ಅಲ್ಲಿ ಈಗ ಮೌನವಾಗಿ ಧೂಳು ಗುಡಿಸುತ್ತಿದೆ!

ಪಾಕಿಸ್ತಾನ ಈ ನೆಲೆಯನ್ನು ತನ್ನ ಡ್ರೋನ್ (UAV) ನಿಯಂತ್ರಣದ ಮುಖ್ಯ ಕೇಂದ್ರವನ್ನಾಗಿ ಬಳಸಿ ಭಾರತದ ವಿರುದ್ಧ ಸಂಚು ರೂಪಿಸುತ್ತಿತ್ತು. ಆದರೆ ಭಾರತದ ವಾಯುಪಡೆ ಯಾವ ಮಟ್ಟಕ್ಕೆ ನಿಖರವಾಗಿ ದಾಳಿ ಮಾಡಿತೆಂದರೆ, ಭೂಗತ ಸೌಲಭ್ಯಗಳನ್ನೂ ಸೀಳಿ ಸಮಾಧಿ ಮಾಡಿತು. ಅಮೆರಿಕದ ಉಪಗ್ರಹ ಚಿತ್ರಣ ವಿಶ್ಲೇಷಕ ಡೇಮಿಯನ್ ಸೈಮನ್ ಅವರ ಪ್ರಕಾರ, “ಆ ಕಟ್ಟಡದ ರಚನೆಯೇ ಸಂಪೂರ್ಣ ಕುಸಿದಿತ್ತು”. ಇದು ಭಾರತದ ಕ್ಷಿಪಣಿ ತಂತ್ರಜ್ಞಾನದ ತಾಕತ್ತಿಗೆ ಸಾಕ್ಷಿ.

ಪಾಕಿಸ್ತಾನ ಕದನ ವಿರಾಮಕ್ಕೆ ಬೇಡಿಕೊಂಡು ಮಂಡಿಯೂರುವ ಕೆಲವೇ ಗಂಟೆಗಳ ಮೊದಲು ಭಾರತದ ವೀರ ಪುತ್ರರು ಈ ಆಪರೇಷನ್ ನಡೆಸಿದ್ದರು. ಕೇವಲ 3 ಗಂಟೆಗಳಲ್ಲಿ (ಬೆಳಿಗ್ಗೆ 2 ರಿಂದ 5ರ ಒಳಗೆ) ಹತ್ತು ವಾಯುನೆಲೆಗಳನ್ನು ಸ್ಮಶಾನವಾಗಿಸಿದ್ದ ವಾಯುಪಡೆಯ ಪರಾಕ್ರಮಕ್ಕೆ ಮುರಿದ್ ನೆಲೆ ಉದಾಹರಣೆಯಾಗಿದೆ.
ಒಟ್ಟಿನಲ್ಲಿ, “ಭಾರತದ ಕೆಣಕಿದರೆ ಉಳಿಗಾಲವಿಲ್ಲ” ಎಂಬ ಸತ್ಯವನ್ನು ಪಾಕಿಸ್ತಾನಕ್ಕೆ ಈಗ ಸ್ಯಾಟಲೈಟ್ ಚಿತ್ರಗಳ ಸಮೇತ ಮನವರಿಕೆ ಮಾಡಿಕೊಡಲಾಗಿದೆ. ತೇಪೆ ಹಚ್ಚುವ ಪಾಕಿಸ್ತಾನದ ತಂತ್ರಕ್ಕೆ ಭಾರತದ ‘ಸಿಂಧೂರ’ ತಿಲಕ ಶಾಶ್ವತವಾಗಿ ಎಳ್ಳುನೀರು ಬಿಟ್ಟಿದೆ!