ಮಂಗಳೂರು: ಬಹರೇನ್ ಕನ್ನಡ ಸಂಘದ 48ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಡಿಸೆಂಬರ್ 12 ರಂದು ನಡೆಯಲಿದ್ದು, ಮಂಗಳೂರಿನ ಖ್ಯಾತ ವೈದ್ಯ ಡಾ. ಅಣ್ಣಯ್ಯ ಕುಲಾಲ್‌ರವರನ್ನು ಗೌರವ ಅತಿಥಿಯಾಗಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಣ್ಣಯ್ಯ ಕುಲಾಲ್ ಉಳ್ಳೂರು, ಸಮಾಜಮುಖಿ ವೈದ್ಯಕೀಯ ಸೇವೆಯ ಜೊತೆ ಜೊತೆಗೆ ಕನ್ನಡ ಸಾಹಿತ್ಯ, ನಾಡು-ನುಡಿ, ನೆಲ, ಜಲ, ಪರಿಸರ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಂಘಟಕ, ಚಿಂತಕ, ಸಮಾಜ ವಿಜ್ಞಾನಿ ಎಂಬ ಗೌರವ ಇವರ ಹೆಗಲ ಮೇಲಿದೆ.
ಪ್ರತಿಷ್ಠಿತ ದೇವರಾಜ ಅರಸು ರಾಜ್ಯ ಪುರಸ್ಕಾರ, ಡಾ. ಬಿ.ಸಿ. ರಾಯ್ ರಾಷ್ಟ್ರೀಯ ಪುರಸ್ಕಾರ ಸಹಿತ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿದೆ. “ದೂರದ ಬಹರೇನ್‌ನಲ್ಲಿದ್ದುಕೊಂಡು ನಮ್ಮ ನಾಡು ನುಡಿ, ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗೆ ಶ್ರಮಿಸುತ್ತಿರುವ ಬಹರೇನ್ ಕನ್ನಡ ಸಂಘದ ಸದಸ್ಯರು ಕನ್ನಡದ ನಿಜವಾದ ರಾಯಭಾರಿಗಳು. ಜಾತಿ, ಮತ,ಧರ್ಮಗಳನ್ನು ಮೀರಿ ನಿಂತ ಅಲ್ಲಿನ ಕನ್ನಡಿಗರ ರಾಜ್ಯೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಅಣ್ಣಯ್ಯ ಕುಲಾಲ್ ಪ್ರತಿಕ್ರಿಯಿಸಿದ್ದಾರೆ.