ಕಾಸರಗೋಡು: ತಾಲೂಕಿನ ಉಲಿಯತಡುಕದಲ್ಲಿ ನಡೆದ ಕಾರು ಕಳವು ಪ್ರಕರಣವನ್ನು ಪೊಲೀಸರು ಕೇವಲ ಮೂರು ದಿನಗಳಲ್ಲಿ ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆ ಮಾಲೀಕರಿಗೆ ತಿಳಿಯದಂತೆ ಕಾರಿನ ಮೂಲ ಕೀಲಿಯನ್ನು ಪಡೆದು ನಕಲಿ ಕೀಲಿಯ ಮೂಲಕ ವಾಹನ ಕಳವುಗೈದ ಆರೋಪ ಇವರ ಮೇಲಿದೆ.

ಜೆ. ರಂಜಾನ್ ಸುಲ್ತಾನ್ ಬಶೀರ್ (25), ಟಿ.ಎಚ್. ಹಮ್ನಾಸ್ (24), ತಲಂಕರ ಹಾಗೂ ಪಿ.ಕೆ. ಅಜರುದ್ದೀನ್ (36), ಪಾಲಕ್ಕಾಡ್ ಬಂಧಿತ ಆರೋಪಿಗಳು. ವಿದ್ಯಾನಗರ ಇನ್ಸ್‌ಪೆಕ್ಟರ್ ಪಿ.ಕೆ. ಶೈನ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಉಲಿಯತಡುಕದ ಇಝತ್ ನಗರದಲ್ಲಿ ಮುಹಮ್ಮದ್ ಮುಸ್ತಫಾ ಬಳಸುತ್ತಿದ್ದ ಕಾರನ್ನು ಚಾಲಕನಾಗಿ ಕೆಲಸ ಮಾಡುತ್ತಿದ್ದ ಜೆ. ರಂಜಾನ್ ಸುಲ್ತಾನ್ ಬಶೀರ್ (25) ಮೋಸದಿಂದ ಕೀಲಿಯನ್ನು ವಶಪಡಿಸಿಕೊಂಡು, ಅದೇ ಮಾದರಿಯ ನಕಲಿ ಕೀಲಿಯಿಂದ 1 ಡಿಸೆಂಬರ್ ಮಧ್ಯರಾತ್ರಿ ಕಾರನ್ನು ಕದ್ದಿದ್ದ. ಕಳುವಿನ ವೇಳೆ ವಾಹನದಲ್ಲಿದ್ದ ₹32,000 ನಗದು, ಕ್ರೆಡಿಟ್ ಕಾರ್ಡ್‌ಗಳು ಹಾಗೂ ವಾಹನ ದಾಖಲೆಗಳನ್ನೂ ಕದ್ದಿದ್ದರು.
ಕಳುವಾದ ಕಾರಿನ ಜಿಪಿಎಸ್ ಸಿಗ್ನಲ್‌ಗಳನ್ನು ಹಿಂಬಾಲಿಸಿದ ಪೊಲೀಸರು, ವಾಹನವನ್ನು ಪಾಲಕ್ಕಾಡ್ ಜಿಲ್ಲೆಯ ಅಗಲಿ ಠಾಣೆ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದುದನ್ನು ಪತ್ತೆಹಚ್ಚಿದರು. ಬಳಿಕ ಪಾಲಕ್ಕಾಡ್ ಪೊಲೀಸರ ಸಹಾಯದಿಂದ ಕಾರು ಹಾಗೂ ಆರೋಪಿ ಅಜರುದ್ದೀನ್ ವಶಕ್ಕೆ ಬಿದ್ದರು. ವಾಹನಕ್ಕೆ ತಮಿಳುನಾಡು ನೋಂದಣಿಯ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು.

ಅಜರುದ್ದೀನ್ ಹೇಳಿಕೆಯ ಪ್ರಕಾರ ಬಶೀರ್ ಹಾಗೂ ಹಮ್ನಾಸ್ ಕಾರನ್ನು ₹1.7 ಲಕ್ಷಕ್ಕೆ ಮಾರಾಟ ಮಾಡಿದ್ದರು. ಕಾರನ್ನು ತಮಿಳುನಾಡಿನ ಡಿಸ್ಮ್ಯಾಂಟ್ಲಿಂಗ್ ಗ್ಯಾಂಗ್‌ಗೆ ಹಸ್ತಾಂತರಿಸುವ ಯೋಜನೆ ಇತ್ತು. ಮಾರಾಟ ಹಣದಲ್ಲಿ ₹1.40 ಲಕ್ಷ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಾರಿನ ಮೂಲ ನಂಬರ್ ಪ್ಲೇಟ್ ಕೂಡ ಪತ್ತೆಯಾಗಿದೆ.
ಮುಖ್ಯ ಆರೋಪಿ ಬಶೀರ್ ವಿರುದ್ಧ ವಿದ್ಯಾನಗರ, ಪರಿಯಾರಂ, ಮಲ್ಪರಂಬ ಮತ್ತು ಕುಂಬಳ ಠಾಣೆಗಳಲ್ಲಿ ಹಲವಾರು ಪ್ರಕರಣಗಳಿದ್ದು, ಹಮ್ನಾಸ್ ಮೇಲೂ ಹೊಸದುರ್ಗ ಮತ್ತು ಮೆಲ್ಪರಂಬ ಠಾಣೆಗಳಲ್ಲಿ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಎಸ್ಪಿ ಡಾ. ಎಂ. ನಂದಗೋಪನ್ ಅವರ ಮೇಲ್ವಿಚಾರಣೆಯಲ್ಲಿ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್, ಎಸ್‌ಐ ಸುರೇಶ್ ಕುಮಾರ್, ಎಸ್‌ಐ ಸಫ್ವಾನ್, ಎಎಸ್‌ಐ ಶೀಬಾ, ಎಎಸ್‌ಐ ನಾರಾಯಣನ್ ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತು.