ಮೀಟರ್ ಬಾಕ್ಸ್ ಮೇಲಿಟ್ಟಿದ್ರು ಕೀ! ಮನೆಮಂದಿ ಬರುವಾಗ ಮನೆಯೆಲ್ಲ ಖಾಲಿ!!

ಉಡುಪಿ : ಮೀಟರ್ ಬಾಕ್ಸ್ ಮೇಲೆ ಇರಿಸಿದ್ದ ಮನೆಯ ಬೀಗದ ಕೀಲಿ ಬಳಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಕಾಪುವಿನ ಮಲ್ಲಾರಿನ ಕಾಪು ಮಲ್ಲಾರು ಗ್ರಾಮದ ರಾಮನಾಥ ಕೃಪಾದಲ್ಲಿ ನಡೆದಿದೆ.

ಪಾದೂರು ಐ.ಎಸ್.ಪಿ.ಆರ್.ಎಲ್ ನಲ್ಲಿ ಹೌಸ್ ಕೀಪರ್ ಆಗಿರುವ ರಾಘವೇಂದ್ರ ಕಿಣಿ ಗುರುವಾರ(ಡಿ.4) ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು, ಅವರ ಪತ್ನಿ ಮಕ್ಕಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಬೆಳಿಗ್ಗೆ 9.45 ಗಂಟೆಗೆ ಮನೆಗೆ ಬೀಗ ಹಾಕಿ ಕೀ ಯನ್ನು ಮನೆಯ ವಿದ್ಯುತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿ ತೆರಳಿದ್ದರು.

ಮಧ್ಯಾಹ್ನ 1.10ಕ್ಕೆ ಮನೆಗೆ ಬಂದು ನೋಡಿದಾಗ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.

ಕಳ್ಳರು ಮನೆಯ ವಿದ್ಯುತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿದ್ದ ಕೀಯಿಂದ ಮನೆಯ ಎದುರಿನ ಬಾಗಿಲನ್ನು ತೆರೆದು ಒಳಗಿನಿಂದ ಲಾಕ್ ಮಾಡಿಕೊಂಡು ಮನೆಯ ಬೆಡ್ ರೂಂನ ಕಪಾಟಿನಲ್ಲಿದ್ದ 28 ಗ್ರಾಂ ತೂಕದ ಕಾಶಿ ತಾಳಿ ಇರುವ ಹವಳದ ಸರ, 8 ಗ್ರಾಂ ತೂಕದ ಹವಳ ಇರುವ ಚಿನ್ನದ ಚೈನ್, 10 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ತೂಕದ ಕಿವಿಯೋಲೆ, 3 ಚಿನ್ನದ ಉಂಗುರ, 8 ಗ್ರಾಂ ತೂಕದ ಜುಮುಕಿ ಮತ್ತು ಬೆಂಡೋಲೆ, ಕೆಂಪು ಬಣ್ಣದ ದಾರದಿಂದ ಹೆಣೆದಿರುವ ಚಿನ್ನದ ಗುಂಡುಗಳಿರುವ ಕೂರ್ಗಿಸ್ ಚೈನ್ ಸಹಿತ 72 ಗ್ರಾಂ ತೂಕದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವುಗೈದಿದ್ದಾರೆ.

ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಕಳವಾಗಿವೆ ಎಂದು ದೂರು ನೀಡಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!