ವೀರಭಾರತಿ ವ್ಯಾಯಾಮ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

ಬೆಂಗ್ರೆ : ಮಂಗಳೂರಿನ ಸ್ಯಾಂಡ್ಸ್ ಪಿಟ್ ಬೆಂಗ್ರೆಯಲ್ಲಿರುವ ವೀರ ಭಾರತಿ ವ್ಯಾಯಾಮ ಶಾಲೆಯ ನೂತನ ಗರ್ಭಗುಡಿಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಇಂದು(ಡಿ.5) ಶುಭ ಮುಹೂರ್ತದಲ್ಲಿ ನೆರವೇರಿತು. 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡಕ್ಕೆ ಶ್ಯಾಮಿಲಿ ಫೌಂಡೇಶನ್ ಟ್ರಸ್ಟ್ ಸ್ಥಾಪಕರು, ಮೊಗವೀರ ಸಮಾಜದ ಮುಖಂಡರಾದ ನಾಡೋಜ ಡಾ. ಜಿ ಶಂಕರ್ ಶಿಲಾನ್ಯಾಸಗೈದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೊಗವೀರ ಬಾಂಧವರು, ಗ್ರಾಮಸ್ಥರು ಹಾಗೂ ಶಾಸಕರು ದಾನಿಗಳ ಸಹಕಾರದಲ್ಲಿ ವ್ಯಾಯಾಮ ಶಾಲೆಯ ನೂತನ ಕಟ್ಟಡ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಸರಕಾರದಿಂದಲೂ ಸಹಾಯಧನ ಒದಗಿಸುವ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದರು. ಮೊಗವೀರ ಸಮಾಜವನ್ನು ಓಬಿಸಿ ವರ್ಗಕ್ಕೆ ಸೇರಿಸುವ ಕುರಿತಂತೆ ನಮ್ಮ ಪ್ರಯತ್ನ ಮುಂದುವರಿದಿದೆ, ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.

ಶಾಸಕರಾದ ವೇದವ್ಯಾಸ ಕಾಮತ್ ಅವರು ಮಾತನಾಡಿ, ಮೊಗವೀರ ಸಮಾಜ ಪ್ರಾಮಾಣಿಕತೆ, ದೈವದೇವರ ಮೇಲಿನ ಭಕ್ತಿ ಹಾಗೂ ಪರಿಶ್ರಮದ ಚೇತನವನ್ನು ಹೊಂದಿರುವ ಸಮುದಾಯವಾಗಿದೆ. ನಾಡೋಜ ಡಾ. ಜಿ ಶಂಕರ್ ಅವರ ನೇತೃತ್ವದಲ್ಲಿ, ಮೊಗವೀರ ಮುಖಂಡರ ಸಹಕಾರದಲ್ಲಿ ಜೀರ್ಣೋದ್ದಾರಕ್ಕೆ ಇಳಿಯಲಾಗಿದೆ. ನನ್ನಿಂದಾದ ಎಲ್ಲಾ ಸಹಕಾರಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಹಕಾರ ರತ್ನ ಚೇತನ್ ಬೆಂಗ್ರೆ ಅವರು ಮಾತನಾಡಿ, ಸಮುದಾಯದ ಬಹಳಷ್ಟು ಕೆಲಸ ಕಾರ್ಯಗಳನ್ನು ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಯಶಸ್ವಿಯಾಗಿ ನಿಭಾಯಿಸಿದ್ದೇನೆ.ಇದೀಗ ನೂತನ ವ್ಯಾಯಮ ಶಾಲಾ ಕಟ್ಟಡದ ನಿರ್ಮಾಣಕ್ಕೆ ಗ್ರಾಮಸ್ಥರ ಸಹಕಾರದೊಂದಿಗೆ, ಸಂಪನ್ಮೂಲದ ಕ್ರೋಡೀಕರಿಸಿ ನಿಗದಿತ ಸಮಯದೊಳಗೆ ಮುಗಿಸಲು ಶ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನೂತನ ವ್ಯಾಯಾಮ ಶಾಲಾ ಕಟ್ಟಡದ ವಿನ್ಯಾಸವನ್ನು ಅನಾವರಣಗೊಳಿಸಲಾಯಿತು. ಧನಸಹಾಯ ಹೊಂದಿಸುವ ಸಲುವಾಗಿ ವಿಜ್ಞಾಪನಾ ಪತ್ರದ ಬಿಡುಗಡೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಮುಂಬೈ ಮಂಡಳಿಯ ಅಧ್ಯಕ್ಷರಾದ ಅಜಿತ್ ಜಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ವೇದಮೂರ್ತಿ ಶಿವಪ್ರಸಾದ್ ತಂತ್ರಿ ಅವರು ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು.

ಶ್ರೀ ಮಹಾವಿಷ್ಣು ವಿಶೇಷಯನ ಭಜನಾ ಮಂದಿರ ಬೆಂಗ್ರೆ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರಾದ ಶಶಿಕುಮಾರ್ ಬೆಂಗ್ರೆ, ಬೆಂಗರೆ ಮಹಾಜನ ಸಭಾ ಅಧ್ಯಕ್ಷರಾದ ಸಂಜಯ್ ಸುವರ್ಣ, ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ವರದರಾಜ ಬಂಗೇರ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮೋಹನ್ ಬೆಂಗ್ರೆ, ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಆನಂದ ಅಮೀನ್, ಪ್ರಮುಖರಾದ ಹರಿಚಂದ್ರ ಪುತ್ರನ್, ಗಿರಿಧರ ಎಸ್ ಸುವರ್ಣ, ಲಕ್ಷ್ಮಣ ಬಿ. ಕಾಂ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

error: Content is protected !!