ಕಂಬಳ ಓಟದಲ್ಲಿ “ಮೈಕ್‌” ಗೆ ಬಿತ್ತು ಕಡಿವಾಣ; ಧ್ವನಿವರ್ಧಕ ಬಳಕೆಗೆ ನಿಯಮಾವಳಿಯ ಸರಮಾಲೆ

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳದ ಮೇಲೆ ಈ ಬಾರಿ ಜಿಲ್ಲಾಡಳಿತದ ವಿವಿಧ ಇಲಾಖೆಗಳು ಹೆಚ್ಚಿನ ಎಚ್ಚರ ವಹಿಸುತ್ತಿದ್ದು, ಪ್ರತೀ ಶನಿವಾರ/ರವಿವಾರ ನಡೆಯುತ್ತಿರುವ ಕಂಬಳದ ಸ್ಥಳಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳೇ ಖುದ್ದು ಹಾಜರಾಗಿ “ಕಂಬಳದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆಯೇ?”, “ಕಂಬಳಗಳು ನಿಯಮ ಹಾಗೂ ಸಮಯಬದ್ಧವಾಗಿ ನಡೆಯುತ್ತಿದೆಯೇ?” ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ರಾತ್ರಿ ಹಗಲು ಕಂಬಳ ಆಯೋಜನೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ರಾತ್ರಿ 10.30 ಗಂಟೆಯ ಬಳಿಕ ಮುಂಜಾನೆವರೆಗೆ ದೊಡ್ಡ ಮಟ್ಟದಲ್ಲಿ ಧ್ವನಿವರ್ಧಕ ಬಳಕೆಯಾಗುತ್ತಿಲ್ಲ. ಕಂಬಳ ಆಯೋಜನೆ ಆಗುವ ಪರಿಸರದ ನಿವಾಸಿಗಳಿಗೆ ಯಾವುದೇ ಸಮಸ್ಯೆ/ಆಕ್ಷೇಪ ಆಗದಂತೆ ಎಚ್ಚರ ವಹಿಸುತ್ತ ರಾತ್ರಿ 10.30ರ ಬಳಿಕ ಕೇವಲ ಕಂಬಳ ಕರೆಯಲ್ಲಿ ಮಾತ್ರ ಸಣ್ಣ ಸ್ವರದೊಂದಿಗೆ ಮೈಕ್‌ ಬಳಕೆ ಸದ್ಯ ನಡೆಯುತ್ತಿದೆ. ಉಳಿದಂತೆ ವೇದಿಕೆ ಸಹಿತ ಇತರ ಭಾಗದಲ್ಲಿ ಬಳಕೆಯಾಗುವ ಧ್ವನಿವರ್ಧಕ ಸಂಪೂರ್ಣ ಬಂದ್‌ ಮಾಡಲಾಗುತ್ತಿದೆ ಎಂದು ಕಂಬಳ ಸಂಘಟಕರು ತಿಳಿಸಿದ್ದಾರೆ.

ಕಂಬಳದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಈ ಹಿಂದೆ ಪೆಟಾ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನಲೆ, ಇದೀಗ ಕಂಬಳವು ನ್ಯಾಯಾಲಯದ ಸೂಚನೆಗಳ ಅನುಸರಣೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಈ ಋತುವಿನಲ್ಲಿ ನಡೆದ ಮೂರು ಕಂಬಳಗಳು ಎಲ್ಲಾ ನಿಯಮಗಳನ್ನು ಪಾಲಿಸಿ, ಸಮಯಬದ್ಧವಾಗಿ ಯಾವುದೇ ವಿವಾದವಿಲ್ಲದೆ, ಸುರಕ್ಷಿತ ಮತ್ತು ಸಾಂಸ್ಕೃತಿಕವಾಗಿ ಪೂರ್ಣಗೊಂಡಿವೆ.\

3 ವರ್ಷದ ಒಳಗಿನ ಕೋಣಗಳ ಓಟ ನಡೆಸದಂತೆ ಹಾಗೂ ಯಾವುದೇ ಕೋಣಗಳಿಗೆ ಹಿಂಸೆ ಆಗದಂತೆ ನೋಡಿಕೊಳ್ಳಲು ಪಶುಪಾಲನ ಇಲಾಖೆ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ. ಸ್ಥಳದಲ್ಲಿ ಇತರ ಯಾವುದೇ ನಿಯಮಾವಳಿ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ತಹಶೀಲ್ದಾರ್‌ಅಧೀನದ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲ ಕಂಬಳ ಕೂಟಕ್ಕೂ ಪೊಲೀಸ್‌, ಪಶುಪಾಲನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ವರದಿ ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಿದ್ದಾರೆ. ಹಾಗೆಯೇ ಕಾನೂನುಬಾಹಿರ ಚಟುವಟಿಕೆಯಾಗಿರುವ ಬೆಟ್ಟಿಂಗ್‌ ಕೂಡ ನಡೆಯದಂತೆ ಪೊಲೀಸ್‌ ಇಲಾಖೆ ನಿಗಾ ವಹಿಸುತ್ತಿದೆ.

ಕಂಬಳ ಅಸೋಸಿಯೇಶನ್‌ ಕಾರ್ಯದರ್ಶಿ ವಿಜಯ್‌ ಕುಮಾರ್‌ಕಂಗಿನಮನೆ , “ಕಂಬಳಕ್ಕೆ ಯಾವುದೇ ಕಾರಣಕ್ಕೂ ಮುಂದೆ ಸಮಸ್ಯೆ ಆಗಬಾರದು ಎಂಬ ನೆಲೆಯಲ್ಲಿ ಸರ್ವರೂ ಅತ್ಯಂತ ಎಚ್ಚರಿಕೆಯಿಂದ ಉಸ್ತುವಾರಿ ನೋಡಿಕೊಳ್ಳುತ್ತಿದ್ದೇವೆ. ಯಾವುದೇ ಸಮಸ್ಯೆ ಆದರೂ ಕಂಬಳಕ್ಕೆ ಮತ್ತೆ ನಿಷೇಧದ ತೂಗುಗತ್ತಿ ಎದುರಾಗಬಹುದು. ಅದಕ್ಕೆ ನಾವು ಕಾರಣರಾಗಬಾರದು. ನಿಗದಿತ ಸಮಯಕ್ಕೆ ಕಂಬಳ ಆಯೋಜಿಸಿ ಯಾವುದೇ ಹಿಂಸೆ ಇಲ್ಲದೆ ಕೋಣಗಳ ಓಟದ ಗತ್ತು ನೋಡುವ ಭಾಗ್ಯ ಎಲ್ಲರಿಗೂ ದೊರೆಯುವಂತಾಗಬೇಕು” ಎಂದು ಹೇಳಿದ್ದಾರೆ.

error: Content is protected !!