
ಕ್ಯಾಲಿಫೋರ್ನಿಯಾ: ಅಮೆರಿಕದ ಎಐ ಸರ್ವಿಸ್ ಸ್ಟಾರ್ಟಪ್ ಆಗಿರುವ ಮೆರ್ಕರ್‌ನ ಮೂವರು ಸಂಸ್ಥಾಪಕರು ವಿಶ್ವದ ಅತ್ಯಂತ ಕಿರಿಯ ಸ್ವನಿರ್ಮಿತ ಶತಕೋಟ್ಯಾಧಿಪತಿಗಳಾಗಿದ್ದಾರೆ. ಶಾಲಾ ಕಾಲೇಜು ದಿನಗಳ ಗೆಳೆಯರಾದ ಆದರ್ಶ್ ಹಿರೇಮಠ, ಸೂರ್ಯ ಮಿಧ ಮತ್ತು ಬ್ರೆಂಡಾನ್ ಫೂಡಿ ಅವರು ವಿಶ್ವದ ಅತೀ ಕಿರಿಯ ಸೆಲ್ಫ್ ಮೇಡ್ ಬಿಲಿಯನೇರ್ ಎನ್ನುವ ದಾಖಲೆಗೆ ಸ್ಥಾಪಿಸಿದ್ದಾರೆ. ಇವರಲ್ಲಿ ಆದರ್ಶ್ ಹಿರೇಮಠ್ ಕರ್ನಾಟಕ ಮೂಲದವರಾಗಿದ್ದು, ಸೂರ್ಯ ಮಿಧ ಕೂಡ ಭಾರತೀಯ ಮೂಲದವರಾಗಿದ್ದಾರೆ. ಬ್ರೆಂಡಾನ್ ಫೂಡಿ ಅಮೆರಿಕಾದ ಸ್ಥಳೀಯರಾಗಿದ್ದಾರೆ.
ಇವರಿಗಿಂತ ಮುಂಚೆ, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರು 2008ರಲ್ಲಿ 23 ವರ್ಷ ವಯಸ್ಸಿನಲ್ಲಿ ಶತಕೋಟ್ಯಾಧಿಪತಿ ಎನಿಸಿಕೊಂಡಿದ್ದರು. ಈಗ 22 ವರ್ಷ ವಯಸ್ಸಿನ ಈ ಮೂವರು ಆ ದಾಖಲೆಯನ್ನು ಮುರಿದಿದ್ದಾರೆ.

ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯ ಪ್ರತಿಷ್ಠಿತ ಬೇ ಏರಿಯಾದಲ್ಲಿ ಬೆಳೆದ ಈ ಮೂವರು ಗೆಳೆಯರು, ಶಾಲಾ ಡಿಬೇಟ್ ಕಾರ್ಯಕ್ರಮದಲ್ಲಿ ಭೇಟಿಯಾದ ನಂತರ ಆಪ್ತ ಸ್ನೇಹಿತರಾದರು. ಉದಯೋನ್ಮುಖ ಪ್ರತಿಭೆಗಳಿಗೆ ನೀಡುವ ಥಿಯೆಲ್ ಫೆಲೋಶಿಪ್‌ಗೆ ಆಯ್ಕೆಯಾದ ನಂತರ, ಅವರು ಕಾಲೇಜು ಓದನ್ನು ತ್ಯಜಿಸಿ, ಫೆಲೋಶಿಪ್ ಗ್ರಾಂಟ್ ಬಳಸಿ 2023ರಲ್ಲಿ “ಮೆರ್ಕರ್” ಎಂಬ ಎಐ ಸ್ಟಾರ್ಟಪ್ ಅನ್ನು ಸ್ಥಾಪಿಸಿದರು.

ಮೆರ್ಕರ್ ಕಂಪನಿಯು ಆರಂಭದಲ್ಲಿ ಅಮೆರಿಕನ್ ಕಂಪನಿಗಳಿಗೆ ಭಾರತದಿಂದ ಫ್ರೀಲ್ಯಾನ್ಸ್ ಕೋಡರ್‌ಗಳನ್ನು ಸೂಚಿಸುವ ಪ್ಲಾಟ್‌ಫಾರ್ಮ್ ಸೃಷ್ಟಿಸಿದ್ದು, ಕ್ರಮೇಣ ಇದು ಭಾರತಲ್ಲಿರುವ ಉದ್ಯೋಗಿಗಳು ಹಾಗೂ ಅಮೆರಿಕನ್ ಕಂಪನಿಗಳ ನಡುವೆ ಕೊಂಡಿಯಾಗಿ ಎಐ ಚಾಲಿತ ಅಪ್ಲಿಕೇಶನ್ ಆಗುತ್ತದೆ. ಬಳಿಕ ಡೇಟಾ ಲೇಬಲಿಂಗ್ ಸಿಸ್ಟಮ್‌ಗಳ ಅಭಿವೃದ್ಧಿ ಮತ್ತು ದೊಡ್ಡ ಎಐ ಲ್ಯಾಬ್‌ಗಳಿಗೆ ಮಾದರಿಗಳನ್ನು ತರಬೇತಿ ಮಾಡಲು ಮಾನವ ಸಂಪನ್ಮೂಲಗಳನ್ನು ಒದಗಿಸುವ ಸೇವೆ ನೀಡುತ್ತದೆ.
ಕಂಪನಿಯಲ್ಲಿ, ಆದರ್ಶ್ ಹಿರೇಮಠ್ ಸಿಟಿಒ (Chief Technology Officer) , ಬ್ರೆಂಡಾನ್ ಫೂಡಿ ಸಿಇಒ (Chief Executive Officer) ಆಗಿಯೂ ಮತ್ತು ಸೂರ್ಯ ಮಿಧಾ ಅವರು ಬೋರ್ಡ್ ಛೇರ್ಮನ್(Chairman) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.