ನಾಡಿಯಾ ಜಿಲ್ಲೆ (ಪ. ಬಂಗಾಳ): ಬೆಳಗಾಗುವ ಕೆಲವೇ ಗಂಟೆಗಳ ಮೊದಲು ನಬದ್ವೀಪ್ ರೈಲ್ವೆ ಕಾರ್ಮಿಕರ ವಸಾಹತಿನಲ್ಲಿ ಅಪರೂಪದ ಮತ್ತು ಹೃದಯಸ್ಪರ್ಶಿ ಘಟನೆ ನಡೆದಿದೆ. ವಸಾಹತಿಯ ಸ್ನಾನಗೃಹದ ಹೊರಗೆ ತಂಪಾದ ನೆಲದ ಮೇಲೆ ಕೆಲವೇ ಗಂಟೆಗಳ ನವಜಾತ ಶಿಶುವನ್ನು ಯಾರೋ ಬಿಟ್ಟು ಹೋಗಿದ್ದರು.

ಮಗುವಿನ ಸುತ್ತಲೂ ಬೀದಿ ನಾಯಿಗಳ ಗುಂಪೊಂದು ಶಿಶುವಿನ ಸುತ್ತ ಪರಿಪೂರ್ಣ ವೃತ್ತ ಮಾಡಿದ್ದಂತೆ ನಿಂತು, ಬೊಗಳದೇ, ಚಲಿಸದೇ, ರಾತ್ರಿಯಿಡೀ ಕಾವಲು ಕಾಯುತ್ತಿತ್ತು. ಬೆಳಕಾಗುವವರೆಗೆ ಯಾರನ್ನೂ ಹತ್ತಿರ ಬರಲು ಬಿಡಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
“ಎದ್ದ ಕೂಡಲೇ ಇದು ನಂಬಲು ಕಷ್ಟವಾಗುವ ದೃಶ್ಯ. ನಾಯಿಗಳು ಆಕ್ರಮಣಕಾರಿಯಲ್ಲ, ಕಾವಲುಗಾರರಂತೆ ವರ್ತಿಸುತ್ತಿದ್ದವು. ಮಗು ಬದುಕಲು ಹೋರಾಡುತ್ತಿದೆ ಅನ್ನೋದು ಅವುಗಳಿಗೆ ಅರ್ಥವಾಗಿದೆಯೇನೋ,” ಎಂದು ನಿವಾಸಿ ಸುಕ್ಲಾ ಮೊಂಡಲ್ ಹೇಳಿದರು. ಮುಂಜಾನೆ ಕೂಗು ಕೇಳಿ ಹೊರಗೆ ಬಂದ ಸುಭಾಷ್ ಪಾಲ್ ಕೂಡ ಇದೇ ದೃಶ್ಯವನ್ನು ಕಂಡು ಬೆಚ್ಚಿಬಿದ್ದಿದ್ದರು.
ಸುಕ್ಲಾ ಮೊಂಡಲ್ ಮಗು ಕಡೆಗೆ ಧೈರ್ಯವಾಗಿ ಹತ್ತಿರ ಹೋದಾಗ ಮಾತ್ರ ನಾಯಿಗಳು ವೃತ್ತವನ್ನು ಸಡಿಲಗೊಳಿಸಿದವು. ಅವರು ಮಗುವನ್ನು ತಮ್ಮ ದುಪಟ್ಟಾದಲ್ಲಿ ಸುತ್ತಿ ನೆರೆಹೊರೆಯವರ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ದರು. ಮಗುವನ್ನು ಮೊದಲು ಮಹೇಶ್‌ಗಂಜ್ ಆಸ್ಪತ್ರೆಗೆ, ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರು ಯಾವುದೇ ಗಾಯಗಳಿಲ್ಲ ಎಂದು ತಿಳಿಸಿದ್ದಾರೆ. ತಲೆಯ ಮೇಲಿದ್ದ ರಕ್ತವು ಜನ್ಮ ಗುರುತು ಆಗಿರಬಹುದೆಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಸ್ಥಳೀಯರ ಪ್ರಕಾರ, ರಾತ್ರಿಯ ಅಡವೇಳೆಯಲ್ಲಿ ಯಾರೋ ಮಗುವನ್ನು ಉದ್ದೇಶಪೂರ್ವಕವಾಗಿ ಅಲ್ಲೇ ಬಿಟ್ಟು ಹೋಗಿರಬಹುದೆಂಬ ಶಂಕೆಯ ಮೇಲೆ ನಬದ್ವೀಪ್ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಇಲಾಖೆ ತನಿಖೆ ಆರಂಭಿಸಿದೆ. ಮಗುವಿನ ಮುಂದಿನ ಆರೈಕೆಗೆ ಅಗತ್ಯ ಕ್ರಮಗಳನ್ನೂ ಕೈಗೊಂಡಿದ್ದಾರೆ.
