ಕೊಪ್ಪಳ: SSLC ವ್ಯಾಸಂಗ ಮಾಡುತ್ತಿದ್ದಂತ ವಿದ್ಯಾರ್ಥಿನಿಯೊಬ್ಬಳು ವಸತಿ ನಿಲಯವೊಂದರ ಶೌಚಾಲಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ನಿಲಯದ ಮೇಲ್ವಿಚಾರಕಿ ಸೇರಿದಂತ 6 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಆರೋಪಿ ಹನುಮನಗೌಡ, ಶಶಿಕಲಾ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾರ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕುಕನೂರು ತಂಡದ ವೈದ್ಯಾಧಿಕಾರಿ ಭರತೇಶ ಹಿರೇಮಠ ಹಾಗೂ ಸಬೀಯಾ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಡಿ.ದೇವರಾಜ ಅರಸ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಂತ ವಿದ್ಯಾರ್ಥಿನಿಯು ಶೌಚಾಲಯಕ್ಕೆ ತೆರಳಿದಾಗ ಅಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು. ಹಾಗಾಗಿ ಯುವಕ ಹನುಮನಗೌಡ ಬತ್ತಿ ಎಂಬಾತ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ, ಪೊಲೀಸರು ಬಂಧಿಸಿದ್ದರು.

ಇನ್ನೂ ಹಾಸ್ಟೆಲ್ ನಲ್ಲಿ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿರುವಂತ ವಿಷಯವನ್ನು ಮುಚ್ಚಿಟ್ಟ ಹಿನ್ನಲೆಯಲ್ಲಿ ವಸತಿ ನಿಲಯದ ಮೇಲ್ವಿಚಾರಕಿ ಶಶಿಕಲಾ ಹಿರೇಮಠ, ಅಡುಗೆ ಕೆಲಸಗಾರರಾದ ಪಾರ್ವತಿ ಕುದಿರಿಮೋತಿ ಹಾಗೂ ಪ್ರಿಯಾಂಕಾ ಸಿಂಧೋಗಿ ಅವರನ್ನು ಅಮಾನತುಗೊಳಿಸಲಾಗಿದೆ.
ಅಂದಹಾಗೇ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಂತ ಬಾಲಕಿಗೆ 8ನೇ ತರಗತಿಯಿಂದಲೇ ಅದೇ ಗ್ರಾಮದ ಯುವಕ ಪರಿಚಯವಾಗಿದ್ದನು. ಮದುವೆಯಾಗುವುದಾಗಿ ನಂಬಿಸಿ ಶಾಲೆ ಬಿಟ್ಟ ನಂತ್ರ ಹಲವು ಬಾರಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಇದೀಗ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿದ್ದಾಗೂ ಈ ಕೃತ್ಯ ಮುಂದುವರೆದಿತ್ತು. ಇದರಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದಳು.