ಹಾಂಗ್ ಕಾಂಗ್: ಗಗನಚುಂಬಿ ಕಟ್ಟಡಗಳಿಗಾಗಿ ಜಗತ್ತಿಗೆ ಹೆಸರುವಾಸಿಯಾದ ಹಾಂಗ್ ಕಾಂಗ್ ಬುಧವಾರ (ನವೆಂಬರ್ 26) ಭೀಕರ ದುರಂತಕ್ಕೆ ಸಾಕ್ಷಿಯಾಯಿತು. ತೈ ಪೊ ಜಿಲ್ಲೆಯ ದೊಡ್ಡ ವಸತಿ ಸಂಕೀರ್ಣವಾದ ವಾಂಗ್ ಫುಕ್ ಕೋರ್ಟ್ ನಲ್ಲಿ ಸಂಭವಿಸಿದ ಭಯಂಕರ ಬೆಂಕಿಯಲ್ಲಿ ಕನಿಷ್ಠ 44 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದ ಸಮಯದಲ್ಲಿ ಎಂಟು ಬ್ಲಾಕ್‌ಗಳ ಈ 32 ಅಂತಸ್ತಿನ ವಸತಿ ಸಂಕೀರ್ಣದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿತ್ತು. ಕಟ್ಟಡಗಳ ಹೊರಭಾಗವನ್ನು ಮುಚ್ಚಿದ್ದ ಬಿದಿರು ಸ್ಕ್ಯಾಫೋಲ್ಡಿಂಗ್ ಮತ್ತು ಬಲೆ ಬೆಂಕಿಯನ್ನು ಕ್ಷಣಾರ್ಧದಲ್ಲಿ ಗೋಪುರಗಳಿಂದ ಮತ್ತೊಂದು ಗೋಪುರಕ್ಕೆ ಹರಡುವಂತೆ ಮಾಡಿತು.

ನವೆಂಬರ್ 26, ಮಧ್ಯಾಹ್ನ 14:51ಕ್ಕೆ ತೈ ಪೊ ವಾಂಗ್ ಫುಕ್ ಕೋರ್ಟ್ ನಲ್ಲಿ ಈ ದುರಂತ ಸಂಭವಿಸಿದ್ದು, ಇದರಲ್ಲಿ ಒಟ್ಟು 1,984 ಅಪಾರ್ಟ್‌ಮೆಂಟ್‌ಗಳಿವೆ. 4,600 ಕ್ಕೂ ಹೆಚ್ಚು ನಿವಾಸಿಗಳು ಇಲ್ಲಿ ವಾಸವಾಗಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪುವ ಹೊತ್ತಿಗೆ ಸ್ಕ್ಯಾಫೋಲ್ಡಿಂಗ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು. ಎಂಟು ಕಟ್ಟಡಗಳ ಏಳು ಬೆಂಕಿಯಿಂದ ಸುಟ್ಟು ಕರಕಲಾಗಿದೆ.
?im=FitAndFill=(596,336))
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ದೃಶ್ಯಗಳಲ್ಲಿ ಕಟ್ಟಡಗಳೊಳಗೆ ಸ್ಫೋಟದ ಶಬ್ದಗಳು ಕೇಳಿಬಂದಿರುವುದು ಕಂಡುಬಂದಿದ್ದಾಗಿ ವಿವರಿಸಿದ್ದು, ಭಯೋತ್ಪಾದಕ ದಾಳಿಯ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಬೆಂಕಿಯಿಂದ ಪಾರಾಗಲು ಸಾಧ್ಯವಾದ ನಿವಾಸಿಗಳನ್ನು ತಾತ್ಕಾಲಿಕ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದುರಂತಕ್ಕೆ ಸಂತಾಪ ಸೂಚಿಸಿದ್ದು, ಸಾವುನೋವು ಮತ್ತು ನಷ್ಟವನ್ನು ಕಡಿಮೆ ಮಾಡಲು ಸಂಪೂರ್ಣ ಶಕ್ತಿಯೊಂದಿಗೆ ಶ್ರಮಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.