ಕಾಸರಗೋಡು: ಕುಟ್ಟಿಕೋಲ್ ಪಂಚಾಯತ್‌ನ ಬಂದಡ್ಕ ಮಣಿಮೂಲ ಪ್ರದೇಶದಲ್ಲಿ ಪುರಾತತ್ವ ಇಲಾಖೆ ನಡೆಸಿದ ಇತ್ತೀಚಿನ ಉತ್ಖನನ ಕಾರ್ಯದಲ್ಲಿ ಮಹಾಶಿಲಾ ಸಂಸ್ಕೃತಿಗೆ ಸೇರಿದ ನೂತನ ಅವಶೇಷಗಳು ಪತ್ತೆಯಾಗಿದ್ದು, ಇಲ್ಲಿ ಪುರಾತನ ಮಾನವ ವಾಸದ ಇತಿಹಾಸಕ್ಕೆ ಮತ್ತೊಂದು ದೃಢ ಸುಳಿವು ಸಿಕ್ಕಂತಾಗಿದೆ.

ಕಲ್ಪತಾಯಮ ಪ್ರದೇಶದಲ್ಲಿ ನಡೆದ ಅಧ್ಯಯನದ ವೇಳೆ ಮುರಿದ ಮಡಿಕೆ ತುಂಡುಗಳು, ಕಬ್ಬಿಣದ ಉಳಿ, ಮತ್ತು ಕಬ್ಬಿಣದ ರಾಡ್‌ಗಳು ಪತ್ತೆಯಾಗಿವೆ. ಈ ವಸ್ತುಗಳನ್ನು ಪುರಾತತ್ವ ಇಲಾಖೆ ಸ್ವಾಧೀನಪಡಿಸಿಕೊಂಡಿದ್ದು, ತಜ್ಞರ ವೈಜ್ಞಾನಿಕ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
ಇದಕ್ಕೂ ಮೊದಲು, ಏಪ್ರಿಲ್ 4ರಂದು ಜಲಜೀವನ ಯೋಜನೆಗಾಗಿ ನಡೆದ ಅಗೆಯುವ ಸಂದರ್ಭದಲ್ಲಿ ಇದೇ ಪ್ರದೇಶದಲ್ಲಿ ಮಹಾಶಿಲಾ ಸಂಸ್ಕೃತಿಯ ಮಡಿಕೆಗಳು ಮತ್ತು ಮೂಳೆ ತುಣುಕುಗಳು ದೊರೆತಿದ್ದವು. ನಂತರ ಮಳೆಯಿಂದಾಗಿ ಉತ್ಖನನ ಕಾರ್ಯ ವಿಳಂಬಗೊಂಡಿದ್ದರೂ, ನವೆಂಬರ್ 16ರಂದು ಮಣ್ಣಿನ ಪದರಗಳನ್ನು ತೆರವುಗೊಳಿಸುವ ಕಾರ್ಯ ಪುನರಾರಂಭಿಸಲಾಯಿತು. ಈ ವೇಳೆ ಕಲ್ಪತಾಯಮ ಬಳಿಯ ಮಣ್ಣಿನ ಕೋಣೆಯಲ್ಲಿ ಅ ಅಮೂಲ್ಯ ಕಲ್ಲುಗಳು, ಕಬ್ಬಿಣದ ಉಪಕರಣಗಳು ಮತ್ತು ಮಡಿಕೆ ಅವಶೇಷಗಳು ಮತ್ತೆ ಪತ್ತೆಯಾದವು.

ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ಪ್ರವೇಶದ್ವಾರವಿರುವ, ಒಂದೇ ಕೆಂಪು ಕಲ್ಲಿನ ಚಪ್ಪಡಿಯಿಂದ ಮುಚ್ಚಲ್ಪಟ್ಟ ಗುಹೆಯಂತಹ ರಹಸ್ಯ ಕೊಠಡಿ ತೆರೆಯುವಾಗ ಮಹಾಶಿಲಾ ಸಂಸ್ಕೃತಿಯ ಇನ್ನಷ್ಟು ಅವಶೇಷಗಳು ಬೆಳಕಿಗೆ ಬಂದಿವೆ. ಈ ಪತ್ತೆಗಳು ಮಣಿಮೂಲ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಪುರಾತತ್ವ ಸಂಪತ್ತು ಅಡಗಿರುವ ಸಾಧ್ಯತೆಯನ್ನು ಬಲಪಡಿಸುತ್ತವೆ.
ಈ ಮಹತ್ವದ ಉತ್ಖನನ ಕಾರ್ಯವನ್ನು ಕೋಝಿಕ್ಕೋಡ್‌ನ ಪಳಸ್ಸಿರಾಜ ಪುರಾತತ್ವ ವಸ್ತುಸಂಗ್ರಹಾಲಯದ ಚಾರ್ಜ್ ಅಧಿಕಾರಿ ಕೆ. ಕೃಷ್ಣರಾಜ್ ಅವರ ನೇತೃತ್ವದಲ್ಲಿ, ಉತ್ಖನನ ಸಹಾಯಕ ಅಧಿಕಾರಿಗಳು ವಿ.ಎ. ವಿಮಲ್‌ಕುಮಾರ್ ಮತ್ತು ಟಿ.ಪಿ. ನಿಬಿನ್ ಅವರನ್ನೊಳಗೊಂಡ ತಂಡ ನಡೆಸುತ್ತಿದೆ.
ಈ ಹೊಸ ಪತ್ತೆಗಳು ಮಣಿಮೂಲ ಪ್ರದೇಶದ ಪ್ರಾಚೀನ ಸಂಸ್ಕೃತಿ, ಸಮಾಧಿ ಸಂರಚನೆ ಮತ್ತು ಕಬ್ಬಿಣ ಯುಗದ ತಾಂತ್ರಿಕ ಸಾಮರ್ಥ್ಯದ ಕುರಿತ ಅಧ್ಯಯನಕ್ಕೆ ಮಹತ್ವದ ಕೊಡುಗೆಯನ್ನು ನೀಡಲಿವೆ ಎಂಬುದು ತಜ್ಞರ ಅಭಿಪ್ರಾಯ.