ಪ್ರಧಾನಿ ಮೋದಿ ಉಡುಪಿ ಭೇಟಿ ಹಿನ್ನೆಲೆ ನವೆಂಬರ್ 28ರಂದು ಶಾಲೆಗಳಿಗೆ ರಜೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಆಗಮಿಸಲಿದ್ದು, ಭದ್ರತೆ ಹಾಗೂ ಶಿಷ್ಟಾಚಾರ ಕ್ರಮಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ನಗರ, ಮಲ್ಪೆ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಒಂದು ದಿನ ರಜೆ ಘೋಷಿಸಿದ್ದಾರೆ.

ಪ್ರಧಾನ ಮಂತ್ರಿಯವರ ಭೇಟಿಗೆ ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿ, ರಾಜ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಲವು ಗಣ್ಯರು ಆಗಮಿಸುವ ಸಾಧ್ಯತೆ ಇರುವುದರಿಂದ, ಭದ್ರತೆ ಹಾಗೂ ಶಿಷ್ಟಾಚಾರ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.

ಪ್ರಧಾನಿ ಭೇಟಿ ಸಂದರ್ಭದಲ್ಲಿ ಉಡುಪಿ ನಗರದಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ, ಶಾಲಾ ಮಕ್ಕಳ ಸುರಕ್ಷತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿದೆ. ಜೊತೆಗೆ, ಕಾರ್ಯಕ್ರಮ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಉಡುಪಿ ಪೊಲೀಸ್ ಅಧೀಕ್ಷಕರ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಉಡುಪಿ ನಗರ ಭಾಗದ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಕ್ಕೆ ಆದೇಶ ಹೊರಡಿಸಲಾಗಿದೆ.

error: Content is protected !!