ಕಾಸರಗೋಡು: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧಿತರಾಗಿದ್ದ 30 ವರ್ಷದ ಮುಬಶೀರ್ ಬುಧವಾರ ಬೆಳಿಗ್ಗೆ ಕಾಸರಗೋಡು ಸಬ್–ಜೈಲಿನಲ್ಲಿ ಮೃತಪಟ್ಟಿದ್ದು, ಘಟನೆಯನ್ನು ಕುಟುಂಬ ಅನುಮಾನಾಸ್ಪದ ಸಾವು ಎಂದು ಆರೋಪಿಸಿದೆ.

ಚೆಮ್ನಾಡ್ ಗ್ರಾಮ ಪಂಚಾಯತ್‌ನ ಡೆಲಿಯ ಕುನ್ನುಪಾರ ಮೂಲದ ಮುಬಶೀರ್ ಬೆಳಿಗ್ಗೆ ಸುಮಾರು 5.30ಕ್ಕೆ ಅಸ್ವಸ್ಥಗೊಂಡಿದ್ದು, ತಕ್ಷಣ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗಮಿಸುವಷ್ಟರಲ್ಲಿ ಆತ ಸಾವನ್ನಪ್ಪಿದ್ದು, ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಮುಬಶೀರ್ ಒಂಬತ್ತು ವರ್ಷಗಳ ಕಾಲ ವಿದೇಶದಲ್ಲಿ ವಾಸವಿದ್ದು, ಎರಡೇ ತಿಂಗಳ ಹಿಂದೆ ಗಲ್ಫ್‌ನಿಂದ ಮನೆಗೆ ಮರಳಿದ್ದರು. ನೆರೆಹೊರೆಯವರ ಪ್ರಕಾರ, ಮೊದಲ ಒಂದು ವರ್ಷ ಕುಟುಂಬದೊಂದಿಗೆ ಸಂಪರ್ಕ ಕಾಯ್ದುಕೊಂಡಿದ್ದ ಆತ ಮಾರ್ಚ್ ತಿಂಗಳಲ್ಲಿ ತಂದೆ ಕುನ್ಹಬ್ದುಲ್ಲಾ ನಿಧನರಾದರೂ ಅವರಿಗೆ ಆ ವಿಚಾರ ತಿಳಿದಿರಲಿಲ್ಲವೆಂದು ತಿಳಿಸಿದ್ದಾರೆ.
2016ರ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ನವೆಂಬರ್ 5ರಂದು ವಿದ್ಯಾನಗರ ಪೊಲೀಸರು ಅವರನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ರಿಮಾಂಡ್ ಮಾಡಿ ಕಾಸರಗೋಡು ಸಬ್–ಜೈಲಿಗೆ ಕಳುಹಿಸಲಾಗಿತ್ತು.

ಜೈಲಿನಲ್ಲಿ ಹಲ್ಲೆ, ಒತ್ತಡ: ಕುಟುಂಬಿಕರ ಆರೋಪ
ತಾಯಿ ಹಾಜಿರಾ ಇಬ್ಬರು ಕುಟುಂಬಿಕರೊಂದಿಗೆ ಭೇಟಿಯಾಗಿದ್ದ ಸಂದರ್ಭ ಮುಬಶೀರ್ “ತನ್ನ ಮೇಲೆ ಜೈಲಿನಲ್ಲಿ ಹಲ್ಲೆ ನಡೆಯುತ್ತಿದೆ, ಇಲ್ಲಿ ಇರಲು ಸಾಧ್ಯವಿಲ್ಲ” ಎಂದು ಅಳುತ್ತಾ ತನ್ನಲ್ಲಿ ತಿಳಿಸಿದ್ದಾಗಿ ಎಂದು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕ್ಕುನ್ನಿಗೆ ತಿಳಿಸಿದೆ.
ಕೌಟುಂಬಿಕರ ಪ್ರಕಾರ, ಮುಬಶೀರ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಜೈಲು ಅಧಿಕಾರಿಗಳು ಪ್ರತಿದಿನ ಟ್ಯಾಬ್ಲೆಟ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು ಆರೋಪಿಸಿದ್ದಾರೆ. ಆದರೆ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಅದು ಖಿನ್ನತೆಗೆ ಸಂಬಂಧಿಸಿದ ಔಷಧಿ ಎಂದು ತಿಳಿಸಿದ್ದಾರೆ.
ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಶವಪರೀಕ್ಷೆಗೆ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಆರ್‌ಡಿಒ, ಜೈಲು ಇಲಾಖೆ ಮತ್ತು ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಶಾಸಕ ನೆಲ್ಲಿಕ್ಕುನ್ನು ತಿಳಿಸಿದ್ದಾರೆ.