ಪುತ್ತೂರು: ನೆಕ್ಕಿಲಾಡಿ ಸುಭಾಷ್ ನಗರದಲ್ಲಿರುವ ಜನತಾ ಕಾಲೋನಿಯಲ್ಲಿ ಹೊಸದಾಗಿ ಬಾಡಿಗೆಗೆ ಪಡೆದಿದ್ದ ಮನೆ ಮೇಲೆ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಕುಸಿದು ಭಾರಿ ಅನಾಹುತ ಸಂಭವಿಸಿದ ಘಟನೆ ಸೋಮವಾರ(ನ.24) ಸಂಜೆ 5 ಗಂಟೆಯ ವೇಳೆಗೆ ನಡೆದಿದ್ದು, ಸ್ಥಳದಲ್ಲಿದ್ದ ಮೇಸ್ತ್ರಿಯೊಬ್ಬರ ಸಕಾಲಿಕ ಎಚ್ಚರಿಕೆಯಿಂದಾಗಿ ನಿವಾಸಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಘಟನೆ ವೇಳೆ ಇಲ್ಯಾಸ್ ಕುಟುಂಬದ ಹೊರತಾಗಿ, 7–8 ಮಕ್ಕಳು ಸೇರಿದಂತೆ ಹಲವಾರು ಸಂಬಂಧಿಕರು ಮನೆಯಲ್ಲಿದ್ದರು, ಅವರಲ್ಲಿ ಹಲವರು ಘಟನೆಯ ಸಮಯದಲ್ಲಿ ಅಡುಗೆಮನೆಯಲ್ಲಿ ಊಟ ತಯಾರಿಸುತ್ತಿದ್ದರು.

ಬಾಡಿಗೆ ಮನೆಯ ಹಿಂದೆ, ಎತ್ತರದ ಪ್ರದೇಶದಲ್ಲಿ, ಬೆಂಗಳೂರಿನಲ್ಲಿ ವಾಸಿಸುವ ಸುಶೀಲಾ ಅವರಿಗೆ ಸೇರಿದ ಮನೆ ಇದೆ. ಕಳೆದ 10 ದಿನಗಳಿಂದ ಅಲ್ಲಿ ಕಾಂಪೌಂಡ್ ಗೋಡೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ನವೆಂಬರ್ 24 ರಂದು ಸಂಜೆ 5 ಗಂಟೆ ಸುಮಾರಿಗೆ, ಗೋಡೆ ಕುಸಿಯುವ ಹಂತದಲ್ಲಿದ್ದನ್ನ ಮೇಸ್ತ್ರಿ ಗಮನಿಸಿದರು. ಅಪಾಯವನ್ನು ಅರಿತ ಅವರು, ಕೆಳಗಿದ್ದ ನಿವಾಸಿಗಳಿಗೆ ತಕ್ಷಣ ಮನೆ ಖಾಲಿ ಮಾಡುವಂತೆ ಹೇಳಿದರು. ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದವರು ಹೊರಗೆ ಧಾವಿಸಿದರು. ಕೆಲವೇ ಕ್ಷಣಗಳಲ್ಲಿ, ಕಾಂಪೌಂಡ್ ಗೋಡೆ ಕುಸಿದು ಬಾಡಿಗೆ ಮನೆಯ ಮೇಲೆ ಅಪ್ಪಳಿಸಿದೆ
ಪರಿಣಾಮ ಅಡುಗೆ ಮನೆ ಸಂಪೂರ್ಣವಾಗಿ ನಾಶವಾಗಿ ಮನೆಗೆ ಹಾನಿಯಾಗಿದೆ. ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಸ್ಟೌವ್ ಮತ್ತು ಪಾತ್ರೆಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ.