ತೆಂಕಸಿ (ತಮಿಳುನಾಡು): ತೆಂಕಸಿ ಜಿಲ್ಲೆಯಲ್ಲಿ ಸೋಮವಾರ ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ. ಮಧುರೈನಿಂದ ಸೆಂಕೊಟ್ಟೈಗೆ ತೆರಳುತ್ತಿದ್ದ ಬಸ್ ಹಾಗೂ ತೆಂಕಸಿಯಿಂದ ಕೋವಿಲ್ಪಟ್ಟಿ ಕಡೆಗೆ ಬರುತ್ತಿದ್ದ ಇನ್ನೊಂದು ಬಸ್ ನಡುವೆ ಅಪಘಾತ ಸಂಭವಿಸಿದೆ.

ಢಿಕ್ಕಿಯ ಪರಿಣಾಮ ಎರಡೂ ಬಸ್‌ಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳೀಯ ಆಡಳಿತ ಮತ್ತು ಅಗ್ನಿಶಾಮಕ ದಳವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು. ಪ್ರಾಥಮಿಕ ತನಿಖೆ ಪ್ರಕಾರ, ಮಧುರೈ–ಸೆಂಕೊಟ್ಟೈ ಮಾರ್ಗದ ಕೀಸರ್ ಬಸ್ ಚಾಲಕನ ಅಜಾಗರೂಕ ಮತ್ತು ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ 28 ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಕುರಿತಂತೆ ಪೊಲೀಸರು ವಿವರವಾದ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. “ಮೃತರಿಗೆ ನನ್ನ ತೀವ್ರ ಸಂತಾಪ. ಗಾಯಗೊಂಡವರ ತ್ವರಿತ ಚೇತರಿಕೆಗೆ ಸರ್ಕಾರದಿಂದ ಸಂಪೂರ್ಣ ಬೆಂಬಲ ದೊರೆಯಲಿದೆ,” ಎಂದು ಅವರು X ನಲ್ಲಿ ಪ್ರಕಟಿಸಿದರು.