ಮಂಗಳೂರು: “ಬಹು ನಿರೀಕ್ಷಿತ ಮಾಸ್ ಮತ್ತು ಆಕ್ಷನ್ ಪೋಸ್ಟರ್ಸ್, ಟೀಸರ್, ಟ್ರೈಲರ್ ಹಾಗೂ ರೈ ರೈ ರೈ ಅದ್ಭುತ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟೂ ಕುತೂಹಲ ಮೂಡಿಸಿರುವ ಅಪರೇಷನ್ ಲಂಡನ್ ಕೆಫೆ ಕನ್ನಡ ಚಿತ್ರವು ಇದೇ ನವೆಂಬರ್ 28ರಂದು ಏಕಕಾಲಕ್ಕೆ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಲತಃ ಕನ್ನಡ ಹಾಗೂ ಮರಾಠಿಯಲ್ಲಿ ಚಿತ್ರೀಕರಣ ನಡೆದಿದ್ದು, ಹಿಂದಿ ಭಾಷೆಗೆ ಡಬ್ಬಿಂಗ್ ಆಗಿದೆ. ನನಗೆ ಕೊಂಕಣಿ ಚೆನ್ನಾಗಿ ಗೊತ್ತು. ಆದರೆ ಮರಾಠಿ ಡೈಲಾಗ್ ಗೊತ್ತಾಗಲಿಲ್ಲ. ಅದಕ್ಕಾಗಿ ನನಗೆ ಡೈಲಾಗ್ ಸೂಪರ್‌ವೈಸರ್ ಒದಗಿಸಿದರು. ದೇವರ ದಯೆಯಿಂದ ಡೈಲಾಗ್ ಚೆನ್ನಾಗಿ ಮೂಡಿಬಂದಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಕ್ಸಲೈಟ್ ಕೃಥಾ ಹಂದರ ಹೊಂದಿರುವ ಥ್ರಿಲ್ಲರ್ ಮೂವಿ ಇದು. ಕಾಡಂಚಿನಲ್ಲಿ ಶೂಟಿಂಗ್ ನಡೆದಿದ್ದು, ವೀಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಎಂದರು.
ಚಿತ್ರದ ನಾಯಕ ನಟ ಕವೀಶ್ ಶೆಟ್ಟಿ ಮಾತನಾಡಿ, ಚಿತ್ರದ ಪ್ರಚಾರ ಕಾರ್ಯದಲ್ಲಿ ಈಗಾಗಲೇ ಚಿತ್ರತಂಡ ತೊಡಗಿಸಿಕೊಂಡಿದ್ದು ಕರ್ನಾಟಕ ಮತ್ತು ಮಹಾರಾಷ್ಟ್ರದೆಲ್ಲೆಡೆ ವಿವಿಧ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.

ನಿರ್ಮಾಪಕ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, ಅರ್ಜುನ್ ಕಾಪಿಕಾಡ್ ಅವರ ಸರಳ ವ್ಯಕ್ತಿತ್ವ ನಮಗೆ ತುಂಬಾ ಹಿಡಿಸಿ ಅವರನ್ನು ನಟಿಸಲು ಕೋರಿದಾಗ ಖುಷಿಯಾಗಿಯೇ ಒಪ್ಪಿಕೊಂಡರು. ಅವರು ತನ್ನನ್ನು ತುಳುವಿನ ಚಿಕ್ಕ ಕಲಾವಿದ ಎಂದೇ ಹೇಳುತ್ತಾರದಾದರೂ ಅಸಲಿಗೆ ಅವರು ತುಳುನಾಡಿನ ಒಬ್ಬ ಲೆಜೆಂಡ್ ಕಲಾವಿದ. ಟೆಕ್ನಿಕಲ್ ಆಗಿ ನಮ್ಮ ತಂಡ ಸ್ಟ್ರಾಂಗ್ ಇದ್ದು, ಫೈಟಿಂಗ್, ಹಾಡು, ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಮರಾಠಿಯ ಜನಪ್ರಿಯ ಕಲಾವಿದರೂ ಇದರಲ್ಲಿ ನಟಿಸಿದ್ದಾರೆ. ಈಗಾಗಲೇ ಹಿಟ್ ಫಿಲ್ಮ್ ನೀಡಿದ ತಂತ್ರಜ್ಞರು ಈ ಸಿಮಿಮಾದಲ್ಲಿ ಕೆಲಸ ಮಾಡಿದ್ದು, ಈ ಚಿತ್ರವನ್ನು ಎಲ್ಲರೂ ಯಶಸ್ವಿಗೊಳಿಸುವಂತೆ ಕೋರಿದರು.

ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ ಪ್ರಕಾಶ್ ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಲಾಂಛನದ ಅಡಿಯಲ್ಲಿ ನಿರ್ಮಿಸಲಾಗಿದೆ.. ನಿರ್ದೇಶಕ ಸಡಗರ ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದರು.

ಚಿತ್ರದ ಬಗ್ಗೆ ನಿರ್ಮಾಪಕ ವಿಜಯಕುಮಾರ್ ಶೆಟ್ಟಿ ಹೇಳಿದ್ದಿಷ್ಟು:
ಚಿತ ಜಿಲ್ಕಾದ ಮೂಲಕ ಭರವಸೆ ಮೂಡಿಸಿರುವ ಯುವ ನಟ ಕವೀಶ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ನಟಿ ಮೇಘಾ ಶೆಟ್ಟಿ ಹಾಡು, ಡ್ಯಾನ್ಸ್ ಮತ್ತು ಟ್ರೇಲರ್ನಲ್ಲಿ ಲಂಗ ದಾವಣಿ ತೊಟ್ಟು ಅಪ್ಪಟ ಬಜಾರಿ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ.

ಅರ್ಜುನ್ ಕಾಪಿಕಾಡ್ ಅರ್ಥಾತ್ ಅರ್ಜುನ್ ದೇವ್ ಈ ಚಿತ್ರದಲ್ಲಿ ಒಬ್ಬ ಖಡಕ್ ಅರ್ಮಿ ಆಫೀಸರ್ ಪಾತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ. ಮರಾಠಿ ಹೆಸರಾಂತ ನಟಿ ಶಿವಾನಿ ಸುರ್ವೆಯ ಜೊತೆ ಮರಾಠಿಯ ವಿರಾಟ್ ಮಡ್ಕ, ಪ್ರಸಾದ್ ಖಾಂಡೇಕರ್ ಮುಂತಾದವರು ಚಾಲೆಂಜಿಂಗ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದ ಚಿರಪರಿಚಿತ ಬಿ. ಸುರೇಶ್, ಕೃಷ್ಣ ಹೆಬ್ಬಾಳೆ, ನೀನಾಸಂ ಅಶ್ವಥ್, ಧರ್ಮೇಂದ್ರ ಅರಸ್ ಜೊತೆಯಲ್ಲಿ ಇನ್ನೂ ಹೆಸರಾಂತ ಕನ್ನಡ ಮತ್ತು ಮರಾಠಿಯ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

ಮುಂಬೈ ಮೂಲದ ಪಾಂಕು ಝಾ ಸಂಗೀತವಿರುವ ಈ ಚಿತ್ರದಲ್ಲಿ ಆರ್. ಡಿ. ನಾಗಾರ್ಜುನ್ ಛಾಯಾಗ್ರಹಣ, ವರದರಾಜ್ ಕಾಮತ್ ಕಲೆ, ವಿಕ್ರಂ ಮೊರ್, ಮಾಸ್ ಮಾದ ಮತ್ತು ಅರ್ಜುನ್ ರಾಜ್ ಸಾಹಸ, ಕವಿರಾಜ್, ಡಾ. ನಾಗೇಂದ್ರ ಪ್ರಸಾದ್ ಮತ್ತು ಸಡಗರ ರಾಘವೇಂದ್ರ ಸಾಹಿತ್ಯವಿದೆ. ಅನಿರುದ್ ಶಾಸ್ತ್ರಿ, ಬ್ರಿಜೇಶ್ ಶಾಂಡಿಲ್ಯ, ಐಶ್ವರ್ಯ ರಂಗರಾಜನ್, ಪ್ರಥ್ವಿ ಭಟ್ ಮತ್ತು ಶ್ರೀ ಲಕ್ಷ್ಮೀ ಬೆಳ್ಳಣ್ಣು ಸಾಹಿತ್ಯಕ್ಕೆ ಇಂಪಾದ ಸ್ವರ ಸೇರಿಸಿದ್ದಾರೆ.

ವಿನಾಥ್ ಮ್ಯೂಸಿಕ್ ಲಾಂಛನದ ಅಡಿಯಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ಈ ಚಿತ್ರದ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಯ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಟ್ರೆಂಡಿಂಗ್‌ನಲ್ಲಿದೆ ಎಂದು ವಿಜಯಕುಮಾರ್ ಶೆಟ್ಟಿ ಹೇಳಿದರು.