ಭಾರತ–ಪಾಕ್ ಯುದ್ಧವನ್ನು ‘ಟೆಸ್ಟ್ ಲ್ಯಾಬ್’ ಮಾಡಿದ ಚೀನಾ: ಯುಎಸ್ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ವಾಷಿಂಗ್ಟನ್/ನವದೆಹಲಿ: ಮೇ ತಿಂಗಳಲ್ಲಿ ನಡೆದ ಭಾರತ–ಪಾಕಿಸ್ತಾನ ಸಂಘರ್ಷವನ್ನು ಚೀನಾ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯಗಳನ್ನು ʻಪರೀಕ್ಷಿಸಲು ಹಾಗೂ ಉತ್ತೇಜಿಸಲುʼ ಅವಕಾಶವಾಗಿ ಬಳಸಿಕೊಂಡಿದೆ ಎಂದು ಯುಎಸ್‌-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ (USCC) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಮಂಗಳವಾರ ಪ್ರಕಟವಾದ ವರದಿಯ ಪ್ರಕಾರ, ನಾಲ್ಕು ದಿನಗಳ ಈ ಸಂಘರ್ಷದ ಸಂದರ್ಭದಲ್ಲಿ ಚೀನಾದು ಮೊದಲ ಬಾರಿಗೆ HQ-9 ವಾಯು ರಕ್ಷಣಾ ವ್ಯವಸ್ಥೆ, PL-15 ವಾಯು–ವಾಯು ಕ್ಷಿಪಣಿ ಮತ್ತು J-10 ಯುದ್ಧವಿಮಾನಗಳನ್ನು ನೈಜ ಯುದ್ಧ ಪರಿಸ್ಥಿತಿಯಲ್ಲಿ ಬಳಸಿಕೊಂಡಿದೆ. “ಇದು ಚೀನಾಗೆ ನೈಜ ಕ್ಷೇತ್ರ ಪರೀಕ್ಷೆಯಂತಾಯಿತು,” ಎಂದು ವರದಿ ಹೇಳುತ್ತದೆ.

ಸಂಘರ್ಷದ ತಕ್ಷಣ, ಚೀನಾ ಪಾಕಿಸ್ತಾನಕ್ಕೆ 40 J-35 ಐದನೇ ತಲೆಮಾರಿನ ಯುದ್ಧವಿಮಾನಗಳು, KJ-500 ನಿಗಾವಿಮಾನಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಮಾರಾಟಕ್ಕೆ ಮುಂದಾದ್ದನ್ನು ವರದಿ ಉಲ್ಲೇಖಿಸಿದೆ.

ಆಯೋಗದ ಪ್ರಕಾರ, ಸಂಘರ್ಷದ ನಂತರ ಚೀನಾದ ರಾಯಭಾರ ಕಚೇರಿಗಳು ತಮ್ಮ ಶಸ್ತ್ರಾಸ್ತ್ರಗಳ “ಯಶಸ್ಸು” ಬಗ್ಗೆ ಜಾಹೀರಾತು ನಡೆಸಿ ಹಲವು ದೇಶಗಳಿಗೆ ಮಾರಾಟವನ್ನು ಉತ್ತೇಜಿಸಲು ಪ್ರಯತ್ನಿಸಿವೆ.

ವರದಿ ಪ್ರಕಾರ, ಭಾರತ–ಪಾಕಿಸ್ತಾನ ಸಂಘರ್ಷದ ಬಳಿಕ ಚೀನಾದು ಫ್ರೆಂಚ್ ರಫೇಲ್ ಯುದ್ಧವಿಮಾನಗಳನ್ನು ಅಪಖ್ಯಾತಿಗೊಳಿಸಲು ಕೃತಕ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ತಪ್ಪು ಮಾಹಿತಿ ಅಭಿಯಾನ ನಡೆಸಿದೆ.

ಫ್ರೆಂಚ್ ಗುಪ್ತಚರ ಸಂಸ್ಥೆಗಳ ವಿವರಗಳ ಪ್ರಕಾರ, “ಚೀನಾದ ಶಸ್ತ್ರಾಸ್ತ್ರಗಳಿಂದ ಧ್ವಂಸವಾದ ರಫೇಲ್ ವಿಮಾನಗಳ ಶಿಲಾಖಂಡ” ಎಂದು ತೋರಿಸಲು ಚೀನಾ AI ಚಿತ್ರಗಳು ಹಾಗೂ ವಿಡಿಯೋ ಗೇಮ್ ದೃಶ್ಯಗಳನ್ನು ದುರುಪಯೋಗಪಡಿಸಿಕೊಂಡಿದೆ. ಇಂಧೋನೇಷ್ಯಾ ರಫೇಲ್ ಖರೀದಿಯನ್ನು ನಿಲ್ಲಿಸಲು ಚೀನಾದ ರಾಯಭಾರ ಕಚೇರಿಗಳು ಒತ್ತಡ ತಂದಿದ್ದರೂ, ಈ ಆರೋಪಗಳನ್ನು ಚೀನಾ ನಿರಾಕರಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ʻಈ ಆಯೋಗಕ್ಕೂ ಚೀನಾದ ಬಗ್ಗೆ ಮಾತನಾಡಲು ವಿಶ್ವಾಸಾರ್ಹತೆ ಇಲ್ಲ. ವರದಿಯೇ ತಪ್ಪು ಮಾಹಿತಿʼ ಎಂದು ವಾದಿಸಿದ್ದಾರೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದ ನಂತರ ಭಾರತ–ಪಾಕ್ ಉದ್ವಿಗ್ನತೆ ಹೆಚ್ಚಾಯಿತು. ದಾಳಿಗೆ ಗಡಿಯಾಚೆಯ ಸಂಪರ್ಕವಿದ್ದುದಾಗಿ ಭಾರತ ಕಂಡುಕೊಂಡ ನಂತರ ಮೇ 7ರಂದು ʻಆಪರೇಷನ್ ಸಿಂಧೂರ್’ ಪ್ರಾರಂಭಿಸಿತು.

ಭಾರತವು ಪಾಕಿಸ್ತಾನ ಹಾಗೂ ಪಿಒಕೆ ಪ್ರದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿತು. ಪ್ರತಿಯಾಗಿ ಪಾಕಿಸ್ತಾನ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದರೂ ಅವನ್ನು ನಿಷ್ಕ್ರಿಯಗೊಳಿಸಲಾಯಿತು. ನಂತರ ಭಾರತೀಯ ಪಡೆಗಳು ಪಾಕಿಸ್ತಾನದ ವಾಯುನೆಲೆಗಳ ಮೇಲೂ ತಿರುಗೇಟು ನೀಡಿದವು. ಮೇ 10ರಂದು ಕದನ ವಿರಾಮ ಜಾರಿಯಾಗಿದ್ದು ಯುದ್ಧ ಕೊನೆಗೊಂಡಿತು.

error: Content is protected !!