ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾ ದಾಖಲೆ ಪ್ರದರ್ಶನ, ಮೂರು ಕೋಟಿ ರೂ. ಗೂ ಅಧಿಕ ಸಂಗ್ರಹ

ಮಂಗಳೂರು: ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ “ಜೈ” ತುಳು ಮತ್ತು ಕನ್ನಡ ಭಾಷೆಯಲ್ಲಿ ಅತ್ಯಧಿಕ ಪ್ರದರ್ಶನ ಕಂಡಿದೆ. ಪ್ರಥಮ ದಿನವೇ 1020 ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿದೆ. ಸಿನಿಮಾ ಐದು ದಿನದಲ್ಲಿ 3.20 ಕೋಟಿ ರೂ ಸಂಗ್ರಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿನಿಮಾದ ಡಬ್ಬಿಂಗ್ ರೈಟ್ಸ್ ಆಡಿಯೋ ರೈಟ್ಸ್ ಮತ್ತು ಪ್ರೀಮಿಯರ್ ಶೋ ಸೇರಿ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹವಾಗಿದೆ.

ಸಿನಿಮಾವನ್ನು ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಮನೆಮಂದಿ ಎಲ್ಲಾ ಇಷ್ಟ ಪಡುವುದರ ಜೊತೆಗೆ ಶಾಲಾ ಮಕ್ಕಳು ಕೂಡಾ ಸಿನಿಮಾ ನೋಡಿ ಮೆಚ್ಚಿದ್ದಾರೆ. ನಮ್ಮ ಚಿತ್ರತಂಡಕ್ಕೂ ತುಂಬಾ ಖುಷಿಯಾಗಿದೆ. ನಾವು ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದೇವೆ. ಬಹಳಷ್ಟು ಯಶಸ್ವಿ ಸಿನಿಮಾಗಳನ್ನು ನೀಡಿದ ನಿರ್ಮಾಪಕರು ನಿರ್ದೇಶಕರು ತುಳುಚಿತ್ರರಂಗದಲ್ಲಿ ಇದ್ದಾರೆ. ಅವರ ಮಾರ್ಗದರ್ಶನ ಮತ್ತು ಅವರ ಅನುಭವಗಳನ್ನು ಪಡೆದು ಸಿನಿಮಾ ನಿರ್ಮಿಸಿದ್ದೇವೆ. ಜೈ ಸಿನಿಮಾ ನನ್ನ ಕನಸು, ಶ್ರದ್ದೆ ಭಕ್ತಿ ಇಟ್ಟು ಸಿನಿಮಾ ಮಾಡಿದ್ದೇವೆ. ಈ ಸಿನಿಮಾಕ್ಕಾಗಿ ಬಹಳಷ್ಟು ಜನರು ಬೆವರು ಸುರಿಸಿದ್ದಾರೆ. ನಮ್ಮ ದುಡಿಮೆಗೆ ಫಲ ದೊರಕಿದೆ ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.

“ಜೈ” ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದ್ದು, ಜಿಲ್ಲೆಯ ಪ್ರಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ಗಿರಿಗಿಟ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಜೈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಕೂಡಾ ಪಾತ್ರ ನಿರ್ವಹಿಸಿದ್ದು ಅದು ಹೆಚ್ಚಿನ ಪರಿಣಾಮ ಬೀರಿದೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣ ಆಗಿದೆ.

ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಚಿತ್ರಕತೆ ರೂಪೇಶ್ ಶೆಟ್ಟಿ ಮತ್ತು ವೇಣು ಹಸ್ರಳ್ಳಿ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್.

“‘ಜೈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮನೋಜ್ ಚೇತನ್ ಡಿ ಸೋಜ ಇನ್ನಿತರರು ಅಭಿನಯಿಸಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ.

error: Content is protected !!