ದೊಡ್ಡಗೌಡರ ʻಪಲ್ಟಿ’ ಹಕೀಕತ್ತು: ಅಂದು ʻಏಕ್ಲಾ ಚಲೋ’, ಇಂದು ʻಜಂಟಿ ಚಲೋ’!

ಬೆಂಗಳೂರು: ರಾಜಕೀಯ ಅಂದ್ರೆ ಇಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ. ಅದಕ್ಕೆ ಸಾಕ್ಷಿ ಎಂಬಂತೆ, ಅಪ್ಪಟ ಮಣ್ಣಿನ ಮಗ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈಗ ತಮ್ಮ ಹಳೆಯ ಖಡಕ್ ನಿಲುವಿಗೆ ತಣ್ಣಗೆ ಎಳ್ಳುನೀರು ಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯವರೆಗೂ “ಲೋಕಲ್‌ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ, ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಒಂಟಿಯಾಗಿ ಹೋರಾಡುತ್ತದೆ” ಎಂದು ಗುಡುಗಿದ್ದ ದೊಡ್ಡಗೌಡರು, ಈಗ ಸದ್ದಿಲ್ಲದೆ ಯು-ಟರ್ನ್ ಹೊಡೆದಿದ್ದಾರೆ!

ಎನ್ಡಿಎ ಮೈತ್ರಿಕೂಟದ ಬೆಚ್ಚನೆಯ ಅಪ್ಪುಗೆಯಲ್ಲೇ ಮುಂದಿನ ನಗರ ಪಾಲಿಕೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸೋಣ ಎಂಬ ಆಶಯವನ್ನು ಅವರು ಈಗ ಹೊರಹಾಕಿದ್ದಾರೆ. “ನಾವು ಪ್ರಾದೇಶಿಕ ಪಕ್ಷ, ಅವರು ರಾಷ್ಟ್ರೀಯ ಪಕ್ಷ. ಅವರ ನಿರ್ಧಾರದ ಮೇಲೆ ನಮ್ಮ ಮುಂದಿನ ಹೆಜ್ಜೆ” ಎನ್ನುವ ಮೂಲಕ ಬಾಲ್ ಅನ್ನು ಬಿಜೆಪಿಯ ಅಂಗಳಕ್ಕೆ ಎಸೆದಿದ್ದಾರೆ.

ಅಂದು-ಇಂದು:
ಈ ಹಿಂದೆ “ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜೊತೆ ಜಂಟಿ ಮಾಡಿಕೊಳ್ಳುವುದಿಲ್ಲ” ಎಂದು ಇದೇ ದೊಡ್ಡಗೌಡರು ಖಡಕ್ ಆಗಿ ಹೇಳಿದ್ದರು. ಈಗ ಅದೇ ಮಾತುಗಳನ್ನು ಅಟೆಂಡ್ ಮಾಡಿ, “ನಾವು ಈಗಾಗಲೇ ಎನ್‌ಡಿಎ ಭಾಗವಾಗಿದ್ದೇವೆ, ಮೈತ್ರಿ ಮುಂದುವರಿಯಲಿ” ಎಂದು ಹೊಸ ರಾಗ ಹಾಡಿದ್ದಾರೆ. ಸದ್ಯಕ್ಕೆ ಜೆಡಿಎಸ್‌ನ ಈ ಪಲ್ಟಿ ಹೊಡೆದ ರಾಜಕೀಯ ನಡೆ ಕಂಡು ಎದುರಾಳಿಗಳು ದಂಗಾಗಿದ್ದಾರೆ. ಬಿಜೆಪಿಯ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದರೆ ಸಾಕು, ಕಮಲ ಮತ್ತು ಕದಿರು ಒಂದಾಗಿ ಕಣಕ್ಕಿಳಿಯುವುದು ಈಗ ಪಕ್ಕಾ ಆದಂತಿದೆ.

error: Content is protected !!