‘ಆಕೆ ನನ್ನ ಮಗಳಿದ್ದಂತೆ’: ಪೋಕ್ಸೋ ಕೇಸ್ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾ ಸ್ಪಷ್ಟನೆ

ಯಾದಗಿರಿ: ಅಪ್ರಾಪ್ತ ಬಾಲಕಿಯ ಜೊತೆ ಅನುಚಿತ ವರ್ತನೆ ತೋರಿದ ಆರೋಪದಡಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಸ್ವಘೋಷಿತ ಸ್ವಾಮೀಜಿ ಮಲ್ಲಿಕಾರ್ಜುನ ಮುತ್ಯಾ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ಆ ಬಾಲಕಿ ನನ್ನ ಮಗಳಿದ್ದಂತೆ, ತಂದೆ-ಮಗಳ ಪ್ರೀತಿಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

“ಬಾಲಕಿ ಇರುವ ವಿಡಿಯೋವನ್ನು ಎಲ್ಲೆಡೆ ಹರಿಬಿಟ್ಟಿರುವುದು ತಪ್ಪು. ಇದರಿಂದ ಆ ಕುಟುಂಬಕ್ಕೆ ನಷ್ಟವಾಗಿದೆ. ಆ ಬಾಲಕಿ ನನ್ನ ಮಗಳಿದ್ದಂತೆ. ಒಬ್ಬ ತಂದೆ ಮಗಳ ಜೊತೆ ಹೇಗೆ ಇರುತ್ತಾರೋ ಅದೇ ರೀತಿ ನಾನು ನಡೆದುಕೊಂಡಿದ್ದೇನೆ. ತಂದೆ ಮಗಳನ್ನು ಪ್ರೀತಿ ಮಾಡುವುದು ತಪ್ಪೇ?” ಎಂದು ಮಲ್ಲಿಕಾರ್ಜುನ ಮುತ್ಯಾ ಪ್ರಶ್ನಿಸಿದ್ದಾರೆ.

“ಈ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎಂಬುದು ಮುಖ್ಯವಲ್ಲ. ಸರ್ಕಾರ ಅಥವಾ ಪೊಲೀಸರು ತನಿಖೆಗೆ ಕರೆದರೆ ಖಂಡಿತ ಹೋಗುತ್ತೇನೆ. ಎಲ್ಲಾ ರೀತಿಯಿಂದಲೂ ತನಿಖೆಗೆ ಸಹಕರಿಸುತ್ತೇನೆ. ಇದು ನಮ್ಮದೇ ಹೋರಾಟ, ಕಾನೂನು ಹೋರಾಟದಲ್ಲಿ ನಮಗೆ ಜಯವಾಗಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ:
ಮಲ್ಲಿಕಾರ್ಜುನ ಮುತ್ಯಾ ಅವರು ಬಾಲಕಿಯೊಬ್ಬಳನ್ನು ತೊಡೆಯ ಮೇಲೆ ಕುರಿಸಿಕೊಂಡು ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರ ಸೂಚನೆಯಂತೆ, ಶಹಾಪುರ ಸಿಡಿಪಿಒ ಮಲ್ಲಣ್ಣ ಉಮಾಪತಿ ಅವರು ಗೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಪೊಲೀಸರು ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 75(2) ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಕರ್ನಾಟಕ ಸೇರಿದಂತೆ ನೆರೆರಾಜ್ಯಗಳಾದ ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ಭಕ್ತರನ್ನು ಹೊಂದಿರುವ ಸ್ವಾಮೀಜಿ, ಸದ್ಯ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!