ಮಂಗಳೂರು: ನಗರದ ಬಾಬುಗುಡ್ಡೆಯ ಗ್ರಾಮಸಂಘದ ಬಳಿ ರೈಲ್ವೆ ಹಳಿ ಮೇಲೆ ಕುಳಿತಿದ್ದ 14 ವರ್ಷದ ಅಪ್ರಾಪ್ತ ಬಾಲಕ ಹಾಗೂ ಆತನ ಸ್ನೇಹಿತೆಯ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿ, ಜಾತಿ ನಿಂದನೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಘಟನೆಯ ವಿವರ: ಫೆ.23ರಂದು ಸಂಜೆ 4 ಗಂಟೆಯ ಸುಮಾರಿಗೆ ಅಪ್ರಾಪ್ತ ಬಾಲಕ ಹಾಗೂ ಆತನ ಸ್ನೇಹಿತೆ ಶಾಲೆಯ ನಂತರ ರೈಲ್ವೆ ಹಳಿ ಬಳಿ ಕುಳಿತು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಸ್ಥಳಕ್ಕೆ ಬಂದ ಆರೋಪಿಗಳಾದ ಸ್ಟೀವನ್ ಮೊಂತೆರೋ ಮತ್ತು ಆತನ ಮಗ ಅವಿಲ್, ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ಬಾಲಕನಿಗೆ ಕಿರುಕುಳ ನೀಡಿದ್ದಾರೆ. “ನೀವಿಲ್ಲಿ ಕಿಸ್ ಮಾಡುತ್ತಿದ್ದೀರಾ? ನಾನು ಇದನ್ನು ರೆಕಾರ್ಡ್ ಮಾಡುತ್ತಿದ್ದೇನೆ, ಫೇಸ್‌ಬುಕ್‌ನಲ್ಲಿ ಹಾಕುತ್ತೇನೆ” ಎಂದು ಬೆದರಿಸಿ ಸಾರ್ವಜನಿಕವಾಗಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಾಲಕನು ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ, ಆರೋಪಿ ಅವಿಲ್ ಆತನನ್ನು ತಡೆದು ನಿಲ್ಲಿಸಿ ಪಕ್ಕದ ರಸ್ತೆಗೆ ಎಳೆದುಕೊಂಡು ಹೋಗಿದ್ದಾರೆ. ಬಾಲಕನು ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದವನೆಂದು ತಿಳಿದಿದ್ದ ಆರೋಪಿ ಸ್ಟೀವನ್ ಮೊಂತೆರೋ, ಸಾರ್ವಜನಿಕವಾಗಿ ಆತನ ಜಾತಿ ಹಿಡಿದು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಆರೋಪಿಗಳಿಬ್ಬರು ಬಾಲಕನಿಗೆ ಕೈಯಿಂದ ಹಲ್ಲೆ ನಡೆಸಿ, “ಇನ್ನೊಮ್ಮೆ ಈ ಕಡೆ ಬಂದರೆ ನಿನ್ನ ಕೈಕಾಲು ಮುರಿಯುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ನಿನ್ನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 126(2), 115(2), 352, 351(1), 79 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಹಲ್ಲೆಯ ವಿಡಿಯೋವನ್ನು ವಾಟ್ಸ್ ಆಪ್‌ನಲ್ಲಿ ವೈರಲ್ ಮಾಡಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.