ವೇಷ ಕಳಚುವ ಮುನ್ನವೇ ಮಹಿಷಾಸುರ ಪಾತ್ರಧಾರಿ ಸಾವು

ಉಡುಪಿ: ಮಂದಾರ್ತಿ ಮೇಳದಲ್ಲಿ ಮಹಿಷಾಸುರ ಪಾತ್ರ ನಿರ್ವಹಿಸುತ್ತಿದ್ದ ಈಶ್ವರ ಗೌಡ ನೆಮ್ಮಾರ್ ಅವರು ಬುಧವಾರ (ನ.19) ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾದ ದುರ್ಘಟನೆ ಕುಂದಾಪುರದ ಸೌಡ ಸಮೀಪ ನಡೆದಿದೆ.

ಶೃಂಗೇರಿ ಸಮೀಪದ ನೆಮ್ಮಾರ್‌ ನಿವಾಸಿಯಾಗಿರುವ ಇವರು ಪ್ರತಿಭಾನ್ವಿತ ಯಕ್ಷಗಾನ ಕಲಾವಿದರಾಗಿದ್ದರಲ್ಲದೆ ಪ್ರಶಸ್ತಿಯನ್ನೂ ಪಡೆದಿದ್ದರು.

ಈಶ್ವರ ಗೌಡ ಅವರು ‘ದೇವಿ ಮಾಹಾತ್ಮೆ’ ಪ್ರಸಂಗದಲ್ಲಿ ಮಹಿಷಾಸುರ ಪಾತ್ರದ ಪರಾಕಾಷ್ಠೆಯೊಂದಿಗೆ ಅಭಿನಯಿಸಿ, ಪಾತ್ರ ಕೊನೆಗೊಳ್ಳುತ್ತಿದ್ದಂತೆ ಚೌಕಿಗೆ ತೆರಳಿದ್ದರು. ಸಂಪೂರ್ಣ ವೇಷ ಕಳಚುವ ಮುನ್ನವೇ ಅವರು ಅಚಾನಕ್ ಕುಸಿದು ಬಿದ್ದರು. ಸಹಕಲಾವಿದರು ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಆಗಲೇ ಅವರು ಪ್ರಾಣ ಕಳೆದುಕೊಂಡಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

error: Content is protected !!