ಖಾಕಿ ವರ್ಸಸ್ ಖಾಕಿ: ‘ಅರೆಬೆತ್ತಲೆ’ ಶೂರರ ಬಂಧನಕ್ಕೆ ಹೋಗಿ ತಾವೇ ‘ಲಾಕ್’ ಆದ ದೆಹಲಿ ಪೊಲೀಸರು!

ನವದೆಹಲಿ/ಶಿಮ್ಲಾ: ದೇಶದ ಕಾನೂನು ಪಾಲಿಸಬೇಕಾದ ಎರಡು ರಾಜ್ಯಗಳ ಪೊಲೀಸ್ ಪಡೆಗಳೇ ಈಗ ನಡುರಸ್ತೆಯಲ್ಲಿ ಬಡಿದಾಡಿಕೊಂಡಿವೆ! ದೆಹಲಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಶಿಮ್ಲಾದಲ್ಲಿ ಅವಿತಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಹಿಡಿಯಲು ಹೋದ ದೆಹಲಿ ಪೊಲೀಸರಿಗೆ ಶಿಮ್ಲಾ ಪೊಲೀಸರು ಬಂಧಿಸಿ ಖದರ್‌ ತೋರಿಸಿದ್ದಾರೆ. ಅಚ್ಚರಿಯೆಂದರೆ, ಆರೋಪಿಗಳನ್ನು ಕರೆದೊಯ್ಯುತ್ತಿದ್ದ ದೆಹಲಿ ಪೊಲೀಸರ ಮೇಲೆಯೇ ʻಕಿಡ್ನ್ಯಾಪ್’ ಕೇಸ್ ದಾಖಲಿಸಿರುವ ಶಿಮ್ಲಾ ಖಾಕಿ, ದೆಹಲಿ ಪೊಲೀಸರನ್ನು ಬ್ಯಾರಿಕೇಡ್ ಹಾಕಿ ಲಾಕಪ್‌ಗೆ ತಳ್ಳುವ ಸಾಹಸ ಮಾಡಿದೆ!

ಕಿಡ್ನ್ಯಾಪ್ ಕೇಸ್ ಮತ್ತು ಖಾಕಿ ಫೈಟ್:
ದೆಹಲಿಯ ಎಐ ಶೃಂಗಸಭೆಯಲ್ಲಿ ಅರೆಬೆತ್ತಲಾಗಿ ರಂಪಾಟ ಮಾಡಿದ್ದ ಸೌರವ್, ಅರ್ಬಾಜ್ ಮತ್ತು ಸಿದ್ಧಾರ್ಥ್ ಎಂಬ ಮೂವರು ಶಿಮ್ಲಾದ ರೆಸಾರ್ಟ್‌ವೊಂದರಲ್ಲಿ ಅಡಗಿದ್ದರು. ಇವರನ್ನು ಹಿಡಿಯಲು ದೆಹಲಿಯಿಂದ ಹೋದ 20ಕ್ಕೂ ಹೆಚ್ಚು ಪೊಲೀಸರ ತಂಡ, ಕೋರ್ಟ್‌ನಿಂದ ಟ್ರಾನ್ಸಿಟ್ ರಿಮಾಂಡ್ ಪಡೆದು ಅವರನ್ನು ದೆಹಲಿಗೆ ಕೊಂಡೊಯ್ಯುತ್ತಿತ್ತು. ಆದರೆ, “ನಮ್ಮ ರಾಜ್ಯದ ರೆಸಾರ್ಟ್‌ನಿಂದ ಸಿಸಿಟಿವಿ ಡಿವಿಆರ್ ಕದ್ದಿದ್ದೀರಿ ಮತ್ತು ನಮ್ಮವರಿಗೆ ಮಾಹಿತಿ ನೀಡದೆ ಆರೋಪಿಗಳನ್ನು ಅಪಹರಿಸುತ್ತಿದ್ದೀರಿ” ಎಂದು ಶಿಮ್ಲಾ ಪೊಲೀಸರು ಧರ್ಮಪುರ ಹೆದ್ದಾರಿಯಲ್ಲಿ ದೆಹಲಿ ಪೊಲೀಸರನ್ನೇ ತಡೆದು ನಿಲ್ಲಿಸಿದ್ದಾರೆ.

Indian Youth Congress protested at Bharat Mandapam during the India AI Impact Summit 2026 Delhi

24 ಗಂಟೆಗಳ ಕಾಲ ಹೈಡ್ರಾಮಾ:
ಶಿಮ್ಲಾ ಪೊಲೀಸರ ಈ ಅನಿರೀಕ್ಷಿತ ದಾಳಿಯಿಂದ ಕಂಗಾಲಾದ ದೆಹಲಿ ಪೊಲೀಸರು ಮತ್ತು ಸ್ಥಳೀಯ ಪೊಲೀಸರ ನಡುವೆ ರಸ್ತೆಯಲ್ಲೇ ಘರ್ಷಣೆ ನಡೆದಿದೆ. “ನಮ್ಮಲ್ಲಿ ಯಾರನ್ನೂ ಹಿಂದೆ ಬಿಡುವುದಿಲ್ಲ, ಎಲ್ಲರೂ ದೆಹಲಿಗೆ ಹೋಗುತ್ತೇವೆ” ಎಂದು ದೆಹಲಿ ಪೊಲೀಸರು ಪಟ್ಟು ಹಿಡಿದರೆ, “ನಿಮ್ಮ ವಿರುದ್ಧ ಕಿಡ್ನ್ಯಾಪ್ ಕೇಸ್ ಇದೆ, ತನಿಖೆಗೆ ಇಲ್ಲೇ ಇರಬೇಕು” ಎಂದು ಶಿಮ್ಲಾ ಪೊಲೀಸರು ಘರ್ಜಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜಕೀಯ ರಂಗದಲ್ಲೂ ಕಿಚ್ಚು ಹತ್ತಿಕೊಂಡಿದೆ. ಕೊನೆಗೆ ದೆಹಲಿ ಪೊಲೀಸರು ಡಿವಿಆರ್ ವಾಪಸ್ ನೀಡಲು ಒಪ್ಪಿ, 24 ಗಂಟೆಗಳ ಸತತ ಜಟಾಪಟಿಯ ನಂತರ ಈ ʻಖಾಕಿ ಸಮರ’ ತಣ್ಣಗಾಗಿದೆ.

error: Content is protected !!