ಮುಂಬೈ: ಹಣ್ಣುಗಳ ರಕ್ಷಣೆಗಾಗಿ ಅವುಗಳಿಗೆ ವಿಷಕಾರಿ ಇಲಿ ಪಾಷಾಣವನ್ನು ಲೇಪಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಘಟನೆ ಮುಂಬೈನ ಮಲಾಡ್‌ನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಹಣ್ಣಿನ ವ್ಯಾಪಾರಿಗಳನ್ನು ಮಲಾಡ್ ಪೊಲೀಸರು ಬಂಧಿಸಿದ್ದಾರೆ.

ಮಲಾಡ್ ಪಶ್ಚಿಮದ ರಾಜನ್‌ಪದ ನಿವಾಸಿಗಳಾದ ಮನೋಜ್ ಸಂಗಮ್‌ಲಾಲ್ ಕೇಸರ್ವಾನಿ(42) ಮತ್ತು ರಾಹುಲ್ ಸದನ್‌ಲಾಲ್ ಕೇಸರ್ವಾನಿ(25) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ರಾತ್ರಿಯಿಡೀ ಇಲಿಗಳು ಹಣ್ಣಿನ ದಾಸ್ತಾನಿಗೆ ಹಾನಿ ಮಾಡದಂತೆ ತಡೆಯಲು ಈ ಕ್ರಮ ಕೈಗೊಂಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪೊಲೀಸರು ಅಂಗಡಿಯಲ್ಲಿದ್ದ ‘ರಾಟೆಲ್’ ಎಂಬ ವಿಷಕಾರಿ ಇಲಿ ಪಾಷಾಣವನ್ನು ವಶಪಡಿಸಿಕೊಂಡಿದ್ದು, ಹಣ್ಣಿನ ಅಂಗಡಿಯನ್ನು ಸೀಲ್ ಮಾಡಿದ್ದಾರೆ.

ಸ್ಲೋಪಾಯಿಸನ್:
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ತಜ್ಞರು, “ಇಲಿ ಪಾಷಾಣದಲ್ಲಿ ಹಳದಿ ರಂಜಕದಂತಹ ಅತ್ಯಂತ ವಿಷಕಾರಿ ಸಂಯುಕ್ತಗಳಿರುತ್ತವೆ. ಇವುಗಳನ್ನು ಆಹಾರ ಪದಾರ್ಥಗಳಿಗೆ ಬಳಸುವುದರಿಂದ ವಾಂತಿ, ತೀವ್ರ ಹೊಟ್ಟೆನೋವು, ಲಿವರ್ ಹಾಗೂ ಕಿಡ್ನಿಯಂತಹ ಅಂಗಾಂಗಗಳ ಹಾನಿ ಸಂಭವಿಸಬಹುದು. ಇದನ್ನು ಸೇವಿಸುವುದು ಪ್ರಾಣಾಪಾಯಕ್ಕೆ ದಾರಿಯಾಗಬಲ್ಲದು,” ಎಂದು ಎಚ್ಚರಿಸಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳು (FDA) ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಇಂತಹ ಬೀದಿ ಬದಿಯ ವ್ಯಾಪಾರಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
