ಕುಖ್ಯಾತ ಕಳ್ಳ “ಇತ್ತೆ ಬರ್ಪೆ ಅಬುಬಕ್ಕರ್” ಮತ್ತೆ ಬಂಧನ: ₹5.65 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ದ್ವಿಚಕ್ರ ವಾಹನ ವಶಕ್ಕೆ

ವೇಣೂರು: ಹೊರರಾಜ್ಯ ಮತ್ತು ವಿವಿಧ ಜಿಲ್ಲೆಗಳಲ್ಲಿ 40 ಕ್ಕೂ ಹೆಚ್ಚು ಮನೆ ಕಳವು ಪ್ರಕರಣಗಳಲ್ಲಿ ತೊಡಗಿದ್ದ ಕುಖ್ಯಾತ ಆರೋಪಿಯನ್ನು ವೇಣೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಮಂಗಳೂರು ಜೋಕಟ್ಟೆ ನಿವಾಸಿ ಅಬುಬಕ್ಕರ್ @ ಅಬ್ದುಲ್ ಖಾದರ್ @ ಇತ್ತೆ ಬರ್ಪೆ ಅಬುಬಕ್ಕರ್ (70) ಬಂಧಿತ ಆರೋಪಿ.

ಈತನಿಂದ ಒಟ್ಟು 56.850 ಗ್ರಾಂ ತೂಕದ, ಸುಮಾರು ₹5,65,000 ಮೌಲ್ಯದ ಚಿನ್ನಾಭರಣಗಳು ಹಾಗೂ ₹60,000 ಮೌಲ್ಯದ ಕಳವು ದ್ವಿಚಕ್ರ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತೂರು ಎಂಬಲ್ಲಿ ಈ ತಿಂಗಳ 2ರಿಂದ 6ರ ನಡುವೆ ಬೀಗ ಹಾಕಿದ್ದ ಮನೆಗೆ ಕಳ್ಳರು ನುಗ್ಗಿ, ಸುಮಾರು 149 ಗ್ರಾಂ ತೂಕದ ₹9,50,000 ಮೌಲ್ಯದ ಚಿನ್ನಾಭರಣ ಕಳವಾಗಿದ್ದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 85/2025, ಕಲಂ 331(1), 331(4), 305 ಬಿ.ಎನ್.ಎಸ್.–2023 ಅಡಿ ಪ್ರಕರಣ ದಾಖಲಾಗಿತ್ತು.

ತನಿಖೆಯನ್ನು ತೀವ್ರಗೊಳಿಸಿದ್ದ ಪೊಲೀಸರು, ಅಪರಾಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿದ್ದ ಮತ್ತು ಹಲವು ವರ್ಷಗಳಿಂದ ಕಳವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಅಬುಬಕ್ಕರ್‌ನ ಸುಳಿವು ಪತ್ತೆ ಹಚ್ಚಿದರು. ಬಳಿಕ ನಿಖರ ಕಾರ್ಯಾಚರಣೆಯ ಮೂಲಕ ಆರೋಪಿತನನ್ನು ದಸ್ತಗಿರಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಚಿನ್ನಾಭರಣಗಳು ಮತ್ತು ಕಳವು ದ್ವಿಚಕ್ರ ವಾಹನ ವಶಪಡಿಸಿಕೊಂಡ ಬಳಿಕ, ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಬೆಳ್ತಂಗಡಿ ಉಪವಿಭಾಗದ ಡಿ.ವೈ.ಎಸ್.ಪಿ. ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಬಿ.ಜಿ. ಸುಬ್ಬಾಪೂರ ಮಠರವರ ತಂಡ ನಡೆಸಿದೆ.

ವೇಣೂರು ಠಾಣೆಯ ಪಿಎಸ್‌ಐ ಅಕ್ಷಯ್ ಡವಗಿ, ಓಮನ ಎನ್., ಎಎಸ್‌ಐ ವೆಂಕಟೇಶ್ ನಾಯ್ಕ, ಬೆನ್ನಿಚ್ಚನ್, ಎಚ್‌.ಸಿ. ಕೃಷ್ಣ, ಧರ್ಮಸ್ಥಳ ಠಾಣೆಯ ಎಚ್‌.ಸಿ. ಪ್ರಶಾಂತ್, ಪಿ.ಸಿ. ಚರಣ್, ವೇಣೂರು ಪಿ.ಸಿ. ಬಸವರಾಜ್, ಪಿ.ಸಿ. ಮೋಹನ್, ಜಯಶ್ರೀ, ಪೂಂಜಾಲಕಟ್ಟೆ ಠಾಣೆಯ ಪಿ.ಸಿ. ರಜಿತ್ ಹಾಗೂ ಮಂಗಳೂರು ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

error: Content is protected !!