
ಮಂಗಳೂರು: ನಗರದ ಪ್ರಧಾನ ಜಂಕ್ಷನ್ ಗಳಲ್ಲಿ ಒಂದಾದ ಬೆಂದುರ್ ನಲ್ಲಿ ಮುಖ್ಯ ರಸ್ತೆಯಲ್ಲೇ ಡ್ರೈನೇಜ್ ನೀರು ಹರಿಯುತ್ತಿದ್ದು ವಾಹನ ಸವಾರರಿಗೆ ಉಚಿತವಾಗಿ ಬೆಂದುರ್ ನೀರಿನ ಅಭಿಷೇಕವಾಗುತ್ತಿದೆ. ಇಲ್ಲಿನ ಕಾಗ್ನಿಜೇಂಟ್ ಕಂಪೆನಿ ಎದುರುಗಡೆ ಸದಾಕಾಲ ಡ್ರೈನೇಜ್ ಮ್ಯಾನ್ ಹೋಲ್ ಓವರ್ ಫ್ಲೋ ಆಗುತ್ತಿದ್ದು ದ್ವಿಚಕ್ರ ಸವಾರರು ಸಂಚಾರಕ್ಕೆ ಸಮಸ್ಯೆ ಪಡುವಂತಾಗಿದೆ.

ಮಹಾನಗರ ಪಾಲಿಕೆ ಅಲ್ಲಲ್ಲಿ ರಸ್ತೆಯನ್ನು ಅಗೆದು ಮ್ಯಾನ್ ಹೋಲ್ ಸರಿಪಡಿಸುತ್ತಿದೆ ಆದರೆ ಇಲ್ಲಿನ ಸಮಸ್ಯೆ ಮಾತ್ರ ಮನಪಾ ಅಧಿಕಾರಿಗಳ ಕಣ್ಣಿಗೆ ಬಿದ್ದಂತಿಲ್ಲ. ಮ್ಯಾನ್ ಹೋಲ್ ನಿಂದ ದಿನವಿಡೀ ಗಟಾರದ ಗಬ್ಬೆದ್ದು ನಾರುವ ನೀರು ಹೊರಬರುತ್ತಿದ್ದು ವಾಹನ ಸವಾರರು, ಪಾದಾಚಾರಿಗಳು ನಗರ ಪಾಲಿಕೆಗೆ ಶಪಿಸುತ್ತಲೇ ಸಂಚಾರ ನಡೆಸುವಂತಾಗಿದೆ.

ಪಕ್ಕದಲ್ಲೇ ಐಟಿ ಕಂಪೆನಿ, ಹೆಸರಾಂತ ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣವಿದ್ದು ಇನ್ನಾದರೂ ಇತ್ತಕಡೆ ಮನಪಾ ಆಡಳಿತ ಮತ್ತು ಅಧಿಕಾರಿಗಳು ಕಣ್ಣು ಬಿಡಬೇಕಾಗಿದೆ.
